ಹೈಡ್ರೊಗ್ರಾಫಿಕ್ಸ್ ಮೂಲಕ ಮುಂದುವರೆದ ನಾಪತ್ತೆಯಾದ ಮೀನುಗಾರರ ಪತ್ತೆ ಕಾರ್ಯಾಚರಣೆ
ಉಡುಪಿ, ಜನವರಿ 30: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ 7 ಮಂದಿ ಮೀನುಗಾರ ಸುಳಿವು ಇಂದಿಗೂ ಪತ್ತೆಯಾಗಿಲ್ಲ. ನಾಪತ್ತೆಯಾಗಿರುವ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್ ನ ಕುರುಹು ಕೂಡ ದೊರೆತಿಲ್ಲ. ಆಳ ಸಮುದ್ರದಲ್ಲೇ ಸುವರ್ಣ ತ್ರಿಭುಜ ಬೋಟ್ ಅಪಘಾತಕ್ಕೆ ಈಡಾಗಿ ಮುಳುಗಿದೆ ಎಂದೇ ಬಲವಾಗಿ ನಂಬಿರುವ ಅಧಿಕಾರಿಗಳು ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಲು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಹೈಡ್ರೊಗ್ರಾಫಿಕ್ಸ್ ನಡೆಸಬಲ್ಲ ನೌಕಾಪಡೆಯ ಐಎನ್ ಎಸ್ ಸಟ್ಲೆಜ್ ಎರಡು ವಾರಗಳಿಂದ ಸಮುದ್ರ ತಳದಲ್ಲಿ ಶೋಧ ನಡೆಸಲಾಗುತ್ತಿದ್ದರೂ ಖಚಿತ ಮಾಹಿತಿ ಇನ್ನೂ ಲಭ್ಯವಾಗದಿರುವುದು ಮಲ್ಪೆ ಮೀನುಗಾರರಲ್ಲಿ ಆತಂಕ ಮತ್ತಷ್ಡು ಹೆಚ್ಚಿಸಿದೆ. ಒಂದೆರಡು ದಿನಗಳಲ್ಲಿ ನೌಕಾಪಡೆಯಿಂದ ನಡೆಯುತ್ತಿರುವ ಶೋಧ ಕಾರ್ಯಾಚರಣೆಯ ವರದಿ ಬರುವ ಸಾಧ್ಯತೆ ಇದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಈ ನಡುವೆ ಒಂದು ವಾರದ ಒಳಗೆ ನಾಪತ್ತೆಯಾಗಿರುವ ಮೀನುಗಾರರ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಎಚ್ಚರಿಸಿದ್ದಾರೆ.

ಈ ನಡುವೆ ನಾಪತ್ತೆಯಾಗಿರುವ ಮಲ್ಪೆ ಮೀನುಗಾರರು ಶ್ರೀಲಂಕಾದಲ್ಲಿ ಪತ್ತೆಯಾಗಿದ್ದಾರೆ ಎಂದು ವಾಟ್ಸಪ್ ನಲ್ಲಿ ಸಂದೇಶಗಳು ಹರಿದಾಡುತ್ತಿವೆ. ಒಬ್ಬರಿಂದ ಒಬ್ಬರಿಗೆ ಫಾರ್ವರ್ಡ್ ಆಗುತ್ತಿವೆ.ಆದರೆ ಸತ್ಯಾಂಶ ತಿಳಿಯದೆ ಒಂದು ವಾಟ್ಸಪ್ ಗ್ರೂಪ್ ನಿಂದ ಮತ್ತೊಂದು ಗ್ರೂಪ್ ಗೆ ಸಂದೇಶಗಳು ಹರಿದಾಡುತ್ತಿವೆ.
ಆದರೆ ಆ ಸಂದೇಶ ಸತ್ಯಕ್ಕೆ ದೂರವಾದದ್ದು ಮತ್ತು ನಾಪತ್ತೆಯಾಗಿರುವ ಮೀನುಗಾರರು ಶ್ರೀಲಂಕಾದಲ್ಲಿ ಪತ್ತೆಯಾಗಿರುವ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.












Click it and Unblock the Notifications