ಉಡುಪಿ; ಮಸೀದಿಗೆ ಮಂಜೂರಾಗಿದ್ದ ಜಾಗ ವಶಕ್ಕೆ ಪಡೆದ ಸರ್ಕಾರ
ಉಡುಪಿ, ಜೂನ್ 25; ಉಡುಪಿ ತಾಲೂಕಿನ ಕೊಡವೂರು ಗ್ರಾಮದಲ್ಲಿ ವಕ್ಫ್ ಬೋರ್ಡ್ ಮುಖೇನ ಕಲ್ಮತ್ ಮಸೀದಿ, ಪಳ್ಳಿ ಜಿಡ್ಡ, ಕೊಡವೂರು ಇವರ ಹೆಸರಿಗೆ ಜಾಗವನ್ನು ಮಂಜೂರು ಮಾಡಲಾಗಿತ್ತು. ಈ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿತ್ತು.
ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಕಂದಾಯ ಸಚಿವ ಆರ್. ಅಶೋಕ ಭೇಟಿಯಾಗಿ ಸ್ಥಳೀಯ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರು. ಜಾಗವನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದ್ದು, ಅದನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯುವಂತೆ ಮನವಿ ಮಾಡಿದ್ದರು.
ಕಂದಾಯ ಸಚಿವರ ಸೂಚನೆಯಂತೆ ಉಡುಪಿ ಜಿಲ್ಲಾಧಿಕಾರಿಗಳು ಕೊಡವೂರು ಗ್ರಾಮದ ಸರ್ವೆ ನಂ 53/6 ರಲ್ಲಿ 0.67 ಸೆಂಟ್ಸ್ ಜಾಗದ ಸ್ಥಳೀಯ ಸ್ಥಿತಿಗತಿ ಬಗ್ಗೆ ವರದಿಯನ್ನು ಸಲ್ಲಿಸಿದ್ದರು. ವರದಿ ಆಧಾರದ ಮೇಲೆ ಜಾಗವನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಈ ಕುರಿತು 22/6/2021ಕ್ಕೆ ಸರ್ಕಾರದ ಹೆಸರಿಗೆ ಅಧಿಸೂಚನೆ ಹೊರಡಿಸಲಾಗಿದೆ.

2018ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಜಿಲ್ಲಾಧಿಕಾರಿಯವರು ಈ ಜಾಗವನ್ನು ವಕ್ಫ್ ಬೋರ್ಡ್ ಮುಖೇನ ಕಲ್ಮತ್ ಮಸೀದಿ ಹೆಸರಿಗೆ ಮಂಜೂರು ಮಾಡಲು ಶಿಫಾರಸು ಮಾಡಿದ್ದರು.
ಜಾಗವನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯುವಂತೆ ಸಲ್ಲಿಸಿದ ಮನವಿಗೆ ತಕ್ಷಣ ಸ್ಪಂದಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಜಾಗವನ್ನು ಮರಳಿ ಪಡೆಯುವಲ್ಲಿ ದಿಟ್ಟ ನಿರ್ಧಾರ ಕೈಗೊಂಡ ಕಂದಾಯ ಸಚಿವರಿಗೆ ಉಡುಪಿ ಜನತೆಯ ಪರವಾಗಿ ಶಾಸಕರು ಕೃತಜ್ಞತೆ ಸಲ್ಲಿಸಿದ್ದಾರೆ.












Click it and Unblock the Notifications