ಹೆಜಮಾಡಿ ಟೋಲ್ ವಿನಾಯಿತಿಗೆ ಒತ್ತಾಯಿಸಿ ಮಸಿ ಬಳಿದುಕೊಂಡು ಅರೆಬೆತ್ತಲೆ ಪ್ರತಿಭಟನೆ
ಉಡುಪಿ, ಜನವರಿ 30:ಪಡುಬಿದ್ರೆ ವ್ಯಾಪ್ತಿಯ ವಾಹನಗಳಿಗೆ ಹೆಜಮಾಡಿ ಟೋಲ್ ನಲ್ಲಿ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ನಡೆಸಲಾಗುತ್ತಿರುವ ಹೋರಾಟ 23 ನೇ ದಿನಕ್ಕೆ ಕಾಲಿರಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆಸಲಾಗುತ್ತಿರುವ ಈ ಪ್ರತಿಭಟನೆ 23ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾಕಾರರರು ಇಂದು ಮಸಿ ಬಳಿದುಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಗಮನಸೆಳೆದರು.
ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ತಾಲೂಕು ಅಧ್ಯಕ್ಷ ಸೈಯ್ಯದ್ ನಿಝಾಮುದ್ದೀನ್ ಹಾಗೂ ಆಸೀಫ್ ಮೈಗೆ ಮಸಿ ಬಳಿದುಕೊಂಡು ಅರೆಬೆತ್ತಲೆಯೊಂದಿಗೆ ಭಿಕ್ಷಾ ಪಾತ್ರೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರರು ಜಿಲ್ಲಾಡಳಿತ, ಜನಪ್ರತಿನಿಧಿಗಳು ಸೇರಿಂದತೆ , ನವಯುಗ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಭೇಟಿ ನೀಡಿ, ಪ್ರತಿಭಟನಾಕಾರರ ಬೇಡಿಕೆಯ ಬಗ್ಗೆ ನವಯುಗ ಅಧಿಕಾರಿಗೆ ಮೊಬೈಲ್‌ನಲ್ಲಿ ಸಂಪರ್ಕಿಸಿ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಟೋಲ್ ವಸೂಲಿ ಮಾಡುತ್ತಿದ್ದು, ಸ್ಥಳೀಯರಿಗೆ ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ಟೋಲ್ ವಿನಾಯಿತಿ ನೀಡಬೇಕು ಎಂದು ಹೇಳಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನವಯುಗ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಇದಕ್ಕೂ ಕಂಪೆನಿ ಒಪ್ಪದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಹೋರಾಟಕ್ಕೆ ತಾನೂ ಕೈ ಜೋಡಿಸುವುದಾಗಿ ಹೇಳಿದರು.












Click it and Unblock the Notifications