ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಳ; ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ, ಜೂನ್ 12; ಕರ್ನಾಟಕದ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ ಗ್ಯಾರಂಟಿ ಈಡೇರಿಸಿದೆ. ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುವ 'ಶಕ್ತಿ ಯೋಜನೆ'ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹಸಿರು ನಿಶಾನೆ ತೋರಿಸಿದ್ದಾರೆ. ಆದರೆ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳೇ ಅಧಿಕವಾಗಿವೆ. ಇಂತಹ ಜಿಲ್ಲೆಗಳಲ್ಲಿ ಉಡುಪಿ ಸಹ ಒಂದು.
ಉಡುಪಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ 'ಶಕ್ತಿ ಯೋಜನೆ'ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು. ಬಳಿಕ ಮಾತನಾಡಿ, 'ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಜಾರಿಗೆ ತಂದಿರುವ ಶಕ್ತಿ ಯೋಜನೆಯು ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕಿಗೆ ನೆರವಾಗಲಿದೆ' ಎಂದು ಹೇಳಿದರು.

"ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರಿ ಬಸ್‌ಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಸರ್ಕಾರದ ಶಕ್ತಿ ಯೋಜನೆಯ ಸಂಪೂರ್ಣ ಪ್ರಯೋಜನ ಜಿಲ್ಲೆಯ ಮಹಿಳೆಯರಿಗೆ ದೊರಕಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳನ್ನು ಹೆಚ್ಚಳ ಮಾಡುವ ಕುರಿತಂತೆ ಸರ್ಕಾರ ಗಮನ ಸೆಳೆಯಲಾಗುವುದು" ಎಂದು ಸಚಿವರು ಭರವಸೆ ನೀಡಿದರು.
"ಸರ್ಕಾರ ಮತ್ತು ಸಾರಿಗೆ ಸಚಿವರೊಂದಿಗೆ ಚರ್ಚಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನಿಸುತ್ತೇನೆ. ಜಿಲ್ಲೆಯಲ್ಲಿ ಪ್ರಸ್ತುತ ಸ್ಥಗಿತಗೊಂಡಿರುವ ನರ್ಮ್ ಬಸ್‌ಗಳ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಸಹ ಬಸ್ ಸಂಖ್ಯೆ ಹೆಚ್ಚಳ ಮಾಡಲಾಗುವುದು" ಎಂದು ಸಚಿವರು ತಿಳಿಸಿದರು.
ಶಕ್ತಿ ಯೋಜನೆ; ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, "ರಾಜ್ಯದಲ್ಲಿ 20,000ಕ್ಕೂ ಅಧಿಕ ಸರ್ಕಾರಿ ಬಸ್‌ಗಳಿದ್ದು ಅವುಗಳಲ್ಲಿ 18609 ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ದೊರೆಯಲಿದೆ. ರಾಜ್ಯದ ಒಟ್ಟು ಸರ್ಕಾರಿ ಬಸ್‌ಗಳಲ್ಲಿನ ಶೇ 95 ಬಸ್‌ಗಳಲ್ಲಿ ಪ್ರತಿ ದಿನ 41.8 ಲಕ್ಷ ಮಹಿಳೆಯರು ದುಡಿಮೆ ಮತ್ತಿತರ ಕಾರ್ಯಗಳಿಗೆ ಸಂಚರಿಸಲಿದ್ದು, ಈ ಉಚಿತ ಪ್ರಯಾಣವು ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬಿ ಜೀವನಕ್ಕೆ ನೆರವಾಗಲಿದೆ" ಎಂದು ಆಶಯ ವ್ಯಕ್ತಪಡಿಸಿದರು.
"ರಾಜ್ಯ ಸರ್ಕಾರವು ಚುನಾವಣಾ ಅವಧಿಯಲ್ಲಿ ನೀಡಿದ ಉಳಿದ 4 ಗ್ಯಾರಂಟಿಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಈ ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕ 4051 ಕೋಟಿ ರೂ. ವೆಚ್ಚವಾಗಲಿದ್ದು, ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ" ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಎರಡು ದಿನದಲ್ಲಿ ಬಿಡುಗಡೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮೀ ಯೋಜನೆ ಬಗ್ಗೆ ಮಾತನಾಡಿ, "ರಾಜ್ಯಾದ್ಯಂತ ಆಗಸ್ಟ್ 15ರಂದು ಯೋಜನೆಗೆ ಚಾಲನೆ ನೀಡಲಾಗುವುದು. ರಾಜ್ಯದ ಬಿಪಿಎಲ್ ಮತ್ತು ಎಪಿಎಲ್‌ನ ಎಲ್ಲಾ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದಾಗಿದ್ದು, ಈ ಕುರಿತ ಅರ್ಜಿ ನಮೂನೆಯನ್ನು ಇನ್ನು 2 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು" ಎಂದರು.
"ಆನ್‌ಲೈನ್ ಮೂಲಕ ಅಥವಾ ಸಿಡಿಪಿಓಗಳ ಮೂಲಕ, ಅಂಗನವಾಡಿ ಶಿಕ್ಷಕರ ಮೂಲಕ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ಸಹ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು" ಎಂದು ಸಚಿವರು ವಿವರಣೆ ನೀಡಿದರು.
ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು. ಆದರೆ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಕಡಿಮೆ ಆದ್ದರಿಂದ ಖಾಸಗಿ ಬಸ್‌ನಲ್ಲಿಯೂ ಉಚಿತ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿತ್ತು.












Click it and Unblock the Notifications