ಹನಿಮೂನ್ ಯೋಚನೆ ಕೈಬಿಟ್ಟು, ಬೀಚ್ ಸ್ವಚ್ಛಗೊಳಿಸಿ ಜನಮನ ಗೆದ್ದ ನವದಂಪತಿ
ಉಡುಪಿ, ಡಿಸೆಂಬರ್ 8: ಉಡುಪಿ ಜಿಲ್ಲೆಯ ನವದಂಪತಿ ಈಗ ವಿಭಿನ್ನ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ನವದಂಪತಿ ಅಂದಮೇಲೆ ಹನಿಮೂನು, ಸುತ್ತಾಟ ಎಂದು ಹೋಗುವುದು ಮಾಮೂಲು, ಅದು ಸಹಜ ಕೂಡ. ಆದರೆ ಉಡುಪಿ ಜಿಲ್ಲೆಯ ಬೈಂದೂರಿನ ಅನುದೀಪ್ - ಮಿನುಷಾ ದಂಪತಿ ಹನಿಮೂನನ್ನು ಪಕ್ಕಕ್ಕಿಟ್ಟು ಸಾಮಾಜಿಕ ಕಾರ್ಯ ನಡೆಸಿ ಶಹಬ್ಬಾಶ್ ಎನಿಸಿಕೊಂಡಿದ್ದಾರೆ.
ವಿಷಯ ಏನೆಂದರೆ ಬೈಂದೂರು ತಾಲೂಕಿನ ಕಳವಾಡಿಯ ಅನುದೀಪ್ ಹೆಗ್ಡೆ ಹಾಗೂ ಮಿನುಷಾ ಕಾಂಚನ್ ದಂಪತಿ ತಮ್ಮ ಮದುವೆಯ ನೆನಪನ್ನು ಸ್ಮರಣೀಯಗೊಳಿಸಲು ಯೋಚಿಸಿದಾಗ, ಅವರಿಗೆ ಹೊಳೆದ ಐಡಿಯಾ ಬೀಚ್ ಸ್ವಚ್ಛ ಮಾಡುವುದು.
ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್. ಮಿನುಷಾ ಫಾರ್ಮಾಸಿಟಿಕಲ್ ಕಂಪನಿ ಉದ್ಯೋಗಿ. ಇಬ್ಬರೂ ಪ್ರಕೃತಿ ಪ್ರಿಯರು. ಮೂರು ವಾರಗಳ ಹಿಂದೆಯಷ್ಟೆ ಸತಿಪತಿಗಳಾದ ಇವರು, ಬೈಂದೂರು ಸಮೀಪದ ಸೋಮೇಶ್ವರ ಬೀಚ್ ನಲ್ಲಿ 8 ದಿನಗಳ ಕಾಲ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುವುದರ ಜೊತೆಗೆ ಯುವಜನತೆಗೆ ಒಳ್ಳೆಯ ಸಂದೇಶವನ್ನೂ ರವಾನಿಸಿದ್ದಾರೆ.

ಇವರ ವಿವಾಹ ನಡೆದದ್ದು, ನ.18 ರಂದು. ಮದುವೆಯಾದ ಹೊಸದರಲ್ಲೂ ಇವರು ಎಲ್ಲಿಗೂ ಹೋಗಲಿಲ್ಲ. ಕಲುಷಿತಗೊಂಡಿದ್ದ ಕಡಲ ಕಿನಾರೆಯನ್ನು ಸ್ವಚ್ಛಗೊಳಿಸುವ ಕೆಲಸ ಪ್ರಾರಂಭಿಸಿದರು. ನವೆಂಬರ್ 27 ರಂದು ಕಡಲ ಕಿನಾರೆಯಲ್ಲಿ ಪ್ರತಿ ದಿನ 2 ಗಂಟೆಯ ಕಾಲ ಸ್ವತಃ ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದಾರೆ.
ತೀರದಲ್ಲಿ ಬಿದ್ದಿದ್ದ ಮದ್ಯದ ಬಾಟಲಿ, ಪ್ಲಾಸ್ಟಿಕ್, ಚಪ್ಪಲಿ ಸಹಿತ ಅನೇಕ ತ್ಯಾಜ್ಯ ಕಸ ಕಡ್ಡಿಗಳನ್ನು ತೆಗೆದು ಪ್ರಕೃತಿ ಪ್ರೇಮ ಮೆರೆದಿದ್ದಾರೆ ಮಾತ್ರವಲ್ಲ, ಸ್ಥಳೀಯರಿಗೆ ಉತ್ತಮ ಸಂದೇಶವನ್ನೂ ನೀಡಿ ಸೈ ಎನಿಸಿಕೊಂಡಿದ್ದಾರೆ.

ಈ ದಂಪತಿಯ ಸಾಮಾಜಿಕ ಕಾರ್ಯವನ್ನು ಮೆಚ್ಚಿದ ಸ್ಥಳೀಯರು, ತಾವೂ ಕೈಜೋಡಿಸಿ ಕಡಲ ಕಿನಾರೆಯನ್ನು ಸ್ವಚ್ಛಗೊಳಿಸಿದ್ದಾರೆ. ಸದ್ಯ ಉಡುಪಿ ಜಿಲ್ಲೆಯ ನಿಜ ಅರ್ಥದ ಆದರ್ಶ ದಂಪತಿಯಾಗಿ ಅನುದೀಪ್- ಮಿನುಷಾ ಜನರ ಮನದಲ್ಲಿ ನೆಲೆಸಿದ್ದಾರೆ.












Click it and Unblock the Notifications