ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು: ಕರಾವಳಿ ಜನರಿಗೆ ಗುಡ್ ನ್ಯೂಸ್
ಉಡುಪಿ, ಮಾರ್ಚ್ 13: ಕರ್ನಾಟಕದ ಕರಾವಳಿಯನ್ನು ಮುಂಬೈ ಜೊತೆ ಸಂಪರ್ಕಿಸುವ ಪ್ರಮುಖ ರೈಲು ಮತ್ಸ್ಯಗಂಧ ಎಕ್ಸ್‌ಪ್ರೆಸ್. ಈ ರೈಲಿನ ಕುರಿತು ಈಗ ಹೊಸ ಅಪ್‌ಡೇಟ್ ಸಿಕ್ಕಿದ್ದು, ಕರಾವಳಿ ಭಾಗದ ಜನರಿಗೆ ಸಿಹಿಸುದ್ದಿ ಸಿಕ್ಕಿದೆ. ಸುಮಾರು 26 ವರ್ಷಗಳಿಂದ ಕರಾವಳಿ-ಮುಂಬೈ ನಡುವೆ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಸಂಪರ್ಕ ಸೇತುವೆಯಾಗಿ ಸಂಚಾರವನ್ನು ನಡೆಸುತ್ತಿದೆ.
ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಹೊಸ ಅಪ್‌ಡೇಟ್ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭೇಟಿ ಮಾಡಿದ ಬಳಿಕ ಈ ಕುರಿತು ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸಂಸದರು ನೀಡಿದ ಮಾಹಿತಿ ಏನು?: ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ ಹೊಸ ಎಲ್‌ಹೆಚ್‌ಬಿ ಕೋಚ್‌ಗಳನ್ನು ಅಳವಡಿಸಿದ್ದು ಇದರ ಕೆಲವು ಕೋಚ್‌ಗಳಲ್ಲಿ ಲೋಪಗಳಿದ್ದು ಕೂಡಲೇ ಅದನ್ನು ಪರಿಶೀಲಿಸುವಂತೆ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ, ಮನವಿ ಮಾಡಿದೆ ಎಂದು ಸಂಸದರು ಹೇಳಿದ್ದಾರೆ.
ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ 2024ರಲ್ಲಿ ತಯಾರಾದ ಹೊಸ ಎಲ್‌ಹೆಚ್‌ಬಿ ಕೋಚ್‌ಗಳ ಜೊತೆಗೆ 2020ರಲ್ಲಿ ತಯಾರಾದ ಹಳೆಯ ಎಲ್‌ಹೆಚ್‌ಬಿ ಕೋಚ್‌ಗಳನ್ನು ಸೇರಿಸಿದ ಇಲಾಖೆಯ ಕಾರ್ಯವನ್ನು ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ.
ಮತ್ಸ್ಯಗಂಧ ರೈಲಿನ ಎಲ್ಲಾ ಟ್ರಿಪ್‌ಗಳಿಗೂ ದೂರುಗಳು ಬಾರದಂತೆ ಉತ್ತಮವಾಗಿರುವ 2024ರ ಕೋಚ್‌ಗಳನ್ನೇ ಬಳಸುವಂತೆ ಸಂಬಂಧಿಸಿದ ವಿಭಾಗೀಯ ರೈಲ್ವೆ ವಲಯಕ್ಕೆ ತಿಳಿಸಲು ಕೋರಿದ್ದು, ಸಚಿವರಿಂದ ಈ ಬಗ್ಗೆ ಸಕಾರತ್ಮಕ ಪ್ರತಿಕ್ರಿಯೆ ಲಭಿಸಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕರಾವಳಿ ಹಾಗೂ ಮುಂಬೈ ಬೆಸೆಯುವ ಪ್ರತಿಷ್ಠಿತ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಇದೀಗ ಎಲ್‌ಹೆಚ್‌ಬಿ ಕೋಚ್‌ಗಳೊಂದಿಗೆ ಕಳೆದ ಫೆಬ್ರವರಿ 17ರಿಂದ ಮೇಲ್ದರ್ಜೆಗೇರಿದ್ದು ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಭರವಸೆ ಸಿಕ್ಕಿದೆ ಎಂದು ಹೇಳಿದ್ದಾರೆ.
ಆದರೆ, ಮತ್ಸ್ಯಗಂಧ ರೈಲಿನ ಎರಡೂ ಬೋಗಿಗಳ ಜತೆ ಮಂಗಳೂರು ಮತ್ತು ಕೇರಳದ ತಿರುವನಂತಪುರಂ ನಡುವೆ ಓಡುವ ಇನ್ನೊಂದು ರೈಲಿನ ಬೋಗಿಗಳ ಹೊಂದಾಣಿಕೆ ವ್ಯವಸ್ಥೆ ಇದ್ದು, ಈ ರೈಲಿನ ಎರಡು ಬೋಗಿಗಳು ಸೇರಿ 2024ರ ಎರಡು ಹೊಸ ಬೋಗಿಗಳ ಜೊತೆ ಮತ್ತೆರಡು 2020ರ ಹಳೇ ಬೋಗಿ ಸೇರಿಕೊಂಡ ಕಾರಣ, ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಕೆಲವು ಟ್ರಿಪ್‌ಗಳಲ್ಲಿ ಹಳೆಯ ಎಲ್‌ಹೆಚ್‌ಬಿ ಬೋಗಿ ಸೇರುವುದು ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಬೇರೆ-ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಕೋಚುಗಳ ಸಮಸ್ಯೆಗಳ ಬಗ್ಗೆ ಬಂದ ದೂರುಗಳು ನಮಗೆ ತಲುಪಿತ್ತು. ಈಗಾಗಲೇ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ತಿಳಿಸಿದ್ದು ಜತೆಗೆ ಈ ಬಗ್ಗೆ ಸಮಸ್ಯೆ ಪರಿಹಾರಕ್ಕೆ ಸಚಿವರನ್ನು ಭೇಟಿಯಾಗಿದ್ದೇನೆ ಎಂದು ಸಂಸದರು ಹೇಳಿದ್ದಾರೆ.
ಮಂಗಳೂರು-ಮುಂಬೈ ನಡುವೆ ಓಡುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ ಉತ್ತಮ ಕೋಚುಗಳನ್ನಷ್ಟೇ ಜೋಡಿಸಲು ತಿಳಿಸಿದ್ದು, ಹಳೆಯ ಕೋಚುಗಳನ್ನು ಅಳವಡಿಸುವ ಪದ್ದತಿಗೆ ಮತ್ತು ಹೊಸ ಹಾಗೂ ಹಳೇ ಕೋಚುಗಳ ಮಿಶ್ರಣ ಮಾಡಿ ಓಡಿಸುವ ಪದ್ದತಿಯನ್ನು ಅನುಸರಿಸದಂತೆ ಸಚಿವರಿಗೆ ಮನವಿ ಮಾಡಿದ್ದು, ಸಚಿವರು ಈ ಬಗ್ಗೆ ಮತ್ಸ್ಯಗಂಧ ರೈಲಿನ ಮೂಲ ವಲಯವಾದ ದಕ್ಷಿಣ ರೈಲ್ವೆಗೆ ತಕ್ಷಣವೇ ಸಮಸ್ಯೆ ಪರಿಹರಿಸಲು ಸೂಚನೆ ನೀಡಿರುತ್ತಾರೆ. ನಮ್ಮ ಮನವಿಗೆ ಕೂಡಲೇ ಸ್ಪಂದಿಸಿದ ಗೌರವಾನ್ವಿತ ಸಚಿವರಿಗೆ ಧನ್ಯವಾದಗಳು ಎಂದು ಸಂಸದರು ತಿಳಿಸಿದ್ದಾರೆ.












Click it and Unblock the Notifications