ಉಡುಪಿ : ಗ್ರಾಪಂ ಉಪಾಧ್ಯಕ್ಷೆ ಮನೆಗೆ ಅತಿಥಿಯಾಗಿ ಬಂದ ಚಿರತೆ
ಉಡುಪಿ, ಆ.08 : ಅಲೆವೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮನೆಯಲ್ಲಿ ಚಿರತೆ ಕಾಣಿಸಿಕೊಂಡು ಜನರನ್ನು ಆತಂಕಗೊಳಿಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಸೋಮವಾರ ರಾತ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಲಕ್ಷ್ಮೀ ಅವರ ಮನೆಯ ನಾಯಿ ವಿಪರೀತವಾಗಿ ಬೊಗಳ ತೊಡಗಿತ್ತು. ಜಯಲಕ್ಷ್ಮೀ ಅವರ ಪತಿ ಹಂಸರಾಜ್ ಪರಿಶೀಲನೆ ನಡೆಸಿದಾಗ ಬಾತ್ ರೂಂನಲ್ಲಿ ಚಿರತೆ ಇರುವುದು ಕಂಡುಬಂದಿತು.

ಚಿರತೆ ಕಂಡು ಆತಂಕಗೊಂಡ ಹಂಸರಾಜ್ ಅವರು ಏನೂ ಮಾಡಲು ತೋಚದೆ ಹಿಂದಿನಿಂದ ಬಂದು ಬಾತ್ ರೂಂ ಬಾಗಿಲು ಬಂದ್ ಮಾಡಿದರು. ನಂತರ ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳಾದ ದಯಾನಂದ, ಗಣಪತಿ ನಾಯಕ್, ಕೇಶವ ಪೂಜಾರಿ, ದೇವರಾಜ, ಪರಶುರಾಮ ಮೇಟಿ ಮುಂತಾದವರ ಸಹಕಾರದಿಂದ ಮಂಗಳವಾರ ಬೆಳಗ್ಗೆ ಚಿರತೆಯನ್ನು ಸೆರೆ ಹಿಡಿಯಲಾಯಿತು.












Click it and Unblock the Notifications