ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿ ಉಡುಪಿ ಜಿಲ್ಲಾಸ್ಪತ್ರೆಗೆ
ಉಡುಪಿ, ಮಾರ್ಚ್ 04: ಉಡುಪಿಯ ಕುಂದಾಪುರ ಮಿನಿ ವಿಧಾನಸೌಧದ ಒಳಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿ ರಾಘವೇಂದ್ರ ಗಾಣಿಗನಿಗೆ ಮಾರ್ಚ್ 13 ರ ವರೆಗೆ ಚಿಕಿತ್ಸೆ ನೀಡುವಂತೆ ಕುಂದಾಪುರ ನ್ಯಾಯಾಲಯ ಆದೇಶಿಸಿದೆ.
ಆರೋಪಿ ರಾಘವೇಂದ್ರ ಗಾಣಿಗನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಆರೋಪಿಯನ್ನು ಇಂದು ಹಾಜರುಪಡಿಸಿದರು.
ಆರೋಪಿ ಪರ ವಕೀಲ ಜಿ.ಸಂತೋಷ್‌ಕುಮಾರ್ ಶೆಟ್ಟಿ ವಾದ ಮಂಡಿಸಿ, ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಆತ ಯಾವುದೇ ದುರುದ್ದೇಶವಿಲ್ಲದೇ ಆ ರೀತಿ ವರ್ತಿಸಿದ್ದಾನೆ, ಪೊಲೀಸರ ಎದುರು ಕೂಡಾ ಅದೇ ರೀತಿ ಕೂಗುತ್ತಿದ್ದ. ಹೀಗಾಗಿ ಆತನಿಗೆ ಚಿಕಿತ್ಸೆಯ ಅಗತ್ಯವಿದ್ದು, ಜಾಮೀನು ನೀಡಬೇಕು ಎಂದು ವಾದಿಸಿದ್ದರು.

ವಾದಗಳನ್ನು ಆಲಿಸಿದ ನ್ಯಾಯಾಲಯವು ಆರೋಪಿ ರಾಘವೇಂದ್ರನಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮಾರ್ಚ್ 13 ರ ವರೆಗೆ ಚಿಕಿತ್ಸೆ ನೀಡಿ ವರದಿ ಸಲ್ಲಿಸುವಂತೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈ ಸಂದರ್ಭದಲ್ಲಿ ಸೂಕ್ತ ಪೊಲಿಸ್ ಭದ್ರತೆಯನ್ನು ನೀಡುವಂತೆಯೂ ಸೂಚಿಸಿದ್ದಾರೆ. ಘಟನೆ ನಡೆದ ದಿನದಂದೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮಾರ್ಚ್ 16 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುವುದರಿಂದ ಆರೋಪಿ ಸಂಬಂಧಿಕರಿಗೆ ರಿಲೀಫ್ ಸಿಕ್ಕಂತಾಗಿದೆ. ಮಾರ್ಚ್ 13 ಕ್ಕೆ ಮತ್ತೆ ನ್ಯಾಯಾಲಯದಲ್ಲಿ ಆಸ್ಪತ್ರೆಯ ವೈದ್ಯರ ವರದಿ ಆಧರಿಸಿ ಮುಂದಿನ ತೀರ್ಮಾನಗಳಾಗಲಿವೆ.












Click it and Unblock the Notifications