ಉಡುಪಿಯಲ್ಲಿ ಕೃಷ್ಣನ ಆರಾಧನೆಗೆ ತಯಾರಿ, ಎಷ್ಟೊಂದು ಉಂಡೆ-ಚಕ್ಕುಲಿ!
ಕೃಷ್ಣ ಜನ್ಮಾಷ್ಟಮಿಯು ಭಾನುವಾರ ಮತ್ತು ಸೋಮವಾರ ನಡೆಯಲಿದ್ದು, ಕೃಷ್ಣ ನಗರಿ ಉಡುಪಿ ಅದಕ್ಕಾಗಿ ಸಜ್ಜುಗೊಳ್ಳುತ್ತಿದೆ. ವಿಶೇಷವಾಗಿ ಕೃಷ್ಣ ಮಠವನ್ನೊಳಗೊಂಡ ಅಷ್ಠಮಠಗಳಲ್ಲಿ ತಯಾರಿ ಭರದಿಂದ ಸಾಗಿದ್ದು, ಹಬ್ಬದ ಕಳೆ ಬಂದಿದೆ. ಈಗಾಗಲೇ ಅಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.
ಭಾನುವಾರ ರಾತ್ರಿ ಅರ್ಘ್ಯ ಪ್ರಧಾನ ಇದ್ದರೆ, ಮರುದಿನ ವಿಟ್ಲಪಿಂಡಿ ಉತ್ಸವ ಸಂಪನ್ನಗೊಳ್ಳಲಿದೆ. ಈ ಪ್ರಯುಕ್ತ ಕೃಷ್ಣ ಮಠದಲ್ಲಿ ಭಕ್ತರಿಗಾಗಿ ವಿತರಿಸಲು ಲಕ್ಷ ಚಕ್ಕುಲಿ -ಉಂಡೆ ಪ್ರಸಾದ ತಯಾರಿಸಲಾಗುತ್ತಿದೆ. ಉಂಡೆ- ಚಕ್ಕುಲಿ ಪ್ರಸಾದವನ್ನು ಕೃಷ್ಣನಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ.
ಸದಾ ಉತ್ಸವಗಳಿಂದ ಮಿಂದೇಳುವ ಕೃಷ್ಣ ಮಠಕ್ಕೆ ಈಗ ಉತ್ಸವಗಳ ರಾಜ ಕೃಷ್ಣ ಜನ್ಮಾಷ್ಟಮಿ ಬಂದಿದೆ. ಪರ್ಯಾಯ ಮಹೋತ್ಸವದ ಬಳಿಕ ಕೃಷ್ಣ ಮಠಕ್ಕೆ ದೊಡ್ಡ ಹಬ್ಬ ಅಷ್ಟಮಿ. ಈಗಾಗಲೇ ಅಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಾನುವಾರ ಮತ್ತು ಸೋಮವಾರ ಉತ್ಸವ ರಂಗೇರಲಿದೆ. ಅಷ್ಟಮಿ ಪ್ರಯುಕ್ತ ಕೃಷ್ಣಮಠ ಮತ್ತು ರಥಬೀದಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಒಂದು ಲಕ್ಷದಷ್ಟು ಚಕ್ಕುಲಿ-ಉಂಡೆ ತಯಾರಿ
ಮುಖ್ಯವಾಗಿ ಕಡೆಗೋಲು ಕೃಷ್ಣನಿಗೆ ಪ್ರಿಯವಾದ ಉಂಡೆ- ಚಕ್ಕುಲಿ ತಯಾರಿಸುವ ಕಾರ್ಯ ಕೃಷ್ಣ ಮಠದಲ್ಲಿ ನಡೆಯುತ್ತಿದೆ. ಸುಮಾರು ಒಂದು ಲಕ್ಷದಷ್ಟು ಚಕ್ಕುಲಿ ಮತ್ತು ಅಷ್ಟೇ ಪ್ರಮಾಣದ ಉಂಡೆ ತಯಾರಿಸಲಾಗುತ್ತಿದೆ. ಇದಕ್ಕಾಗಿ ನುರಿತ ಬಾಣಸಿಗರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಬಾಯಲ್ಲಿ ನೀರೂರಿಸುವ ಚಕ್ಕುಲಿ ಮತ್ತು ಉಂಡೆ ಪ್ರಸಾದವನ್ನು ಅಷ್ಟಮಿಯಂದು ಕೃಷ್ಣನಿಗೆ ಅರ್ಪಿಸಲಾಗುತ್ತದೆ. ಆ ಬಳಿಕ ಕೃಷ್ಣಮಠಕ್ಕೆ ಬಂದ ಭಕ್ತರಿಗೆ ವಿತರಿಸಲಾಗುತ್ತದೆ.

50ಕ್ಕೂ ಹೆಚ್ಚು ನುರಿತ ಬಾಣಸಿಗರಿಂದ ಹಗಲಿರುಳೂ ಶ್ರಮ
ಉಂಡೆ ಚಕ್ಕುಲಿ ಪ್ರಸಾದ ತಯಾರಿಸುವುದು ಕೃಷ್ಣಜನ್ಮಾಷ್ಟಮಿಯ ಪ್ರಮುಖ ಸಿದ್ಧತೆಗಳಲ್ಲಿ ಒಂದು. ಇದಕ್ಕಾಗಿಯೇ ಮಠದಲ್ಲಿ 50ಕ್ಕೂ ಹೆಚ್ಚು ನುರಿತ ಬಾಣಸಿಗರು ಹಗಲಿರುಳೂ ಶ್ರಮ ವಹಿಸುತ್ತಿದ್ದಾರೆ. ಉಂಡೆ ಮತ್ತು ಚಕ್ಕುಲಿ ಕೃಷ್ಣನಿಗೂ ಪ್ರಿಯವಾದದ್ದು. ಈ ಕಾರ್ಯವನ್ನು ಅತ್ಯಂತ ಭಕ್ತಿಯಿಂದ ಮಾಡಲಾಗುತ್ತಿದೆ.

ತಯಾರಕರಿಗೆ ಶ್ರೇಯಸ್ಸು ತರುತ್ತದೆ ಎಂಬುದು ನಂಬಿಕೆ
ಈಗಾಗಲೇ ಮಠದಲ್ಲಿ ಸಾವಿರಾರು ಚಕ್ಕುಲಿ ಮತ್ತು ಉಂಡೆಗಳು ಸಿದ್ಧಗೊಂಡಿವೆ. ಭಾನುವಾರದ ತನಕವೂ ಈ ಕಾರ್ಯ ಮುಂದುವರಿಯಲಿದ್ದು, ಕೃಷ್ಣನಿಗೆ ಸಮರ್ಪಿಸಿದ ಬಳಿಕವಷ್ಟೇ ಭಕ್ತರಿಗೆ ಲಭ್ಯವಾಗುತ್ತವೆ. ರುಚಿರುಚಿಯಾದ ಈ ಉಂಡೆ ಚಕ್ಕುಗಳನ್ನು ಕಳೆದ ಮೂವತ್ತು ವರ್ಷಗಳಿಂದಲೂ ನುರಿತ ಬಾಣಸಿಗರೇ ಸಿದ್ಧಪಡಿಸುತ್ತಿದ್ದು, ಈ ಕೆಲಸ ತಮಗೆ ಶ್ರೇಯಸ್ಸು ತರುತ್ತದೆ ಎಂದು ಬಾಣಸಿಗರು ನಂಬುತ್ತಾರೆ.

ಮೂವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಸಾದ ವಿತರಣೆ
ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಮಾತ್ರವಲ್ಲ, ಮಠದಿಂದ ನಿತ್ಯ ಅನ್ನಪ್ರಸಾದ ನೀಡುವ ಶಾಲಾ ವಿದ್ಯಾರ್ಥಿಗಳಿಗೂ ಈ ಪ್ರಸಾದ ಸಿಗಲಿದೆ. ಈ ಬಾರಿ ಮೂವತ್ತು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಈ ರುಚಿರುಚಿಯಾದ ಪ್ರಸಾದದ ಭಾಗ್ಯ ಸಿಗುತ್ತದೆ. ಒಟ್ಟಾರೆ ಉತ್ಸವಪ್ರಿಯ, ಪೊಡವಿಗೊಡೆಯ, ಕಡೆಗೋಲು ಕೃಷ್ಣನನ್ನು ಜನ್ಮಾಷ್ಟಮಿ ಸಂದರ್ಭದಲ್ಲಿ ಆರಾಧಿಸಲು ಎಲ್ಲ ಸಿದ್ಧತೆ ನಡೆದಿದೆ.












Click it and Unblock the Notifications