Karkala Assembly Constituency : ಗುರು, ಶಿಷ್ಯರ ರಾಜಕೀಯ ಮೇಲಾಟ, ದಡ ಸೇರುವವರಾರು? ವರದಿ, ವಿಶ್ಲೇಷಣೆ
ಕಾರ್ಕಳ ವಿಧಾನಸಭಾ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಶ್ರೀರಾಮಸೇನೆಯ ಅಭ್ಯರ್ಥಿ ಕಣದಲ್ಲಿ ಇರುವ ಸಾಧ್ಯತೆ ಇರುವುದರಿಂದ ಕ್ಷೇತ್ರದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದ ವರದಿ, ವಿಶ್ಲೇಷಣೆ..
ಉಡುಪಿ ಜಿಲ್ಲಾ ವ್ಯಾಪ್ತಿಗೆ ಬರುವ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾರ್ಕಳ ಕೂಡಾ ಒಂದು. ಗೊಮ್ಮಟ ನಗರಿ ಎಂದೂ ಕರೆಯಲ್ಪಡುವ ಕಾರ್ಕಳ ಈಗ ಚುನಾವಣಾ ಅಖಾಡಕ್ಕೆ ತೆರದು ಕೊಳ್ಳುತ್ತಿದೆ.
ತುಳು ಭಾಷೆಯಲ್ಲಿ ಕಾರ್ಲ, ಶತಮಾನಗಳ ಹಿಂದೆ ಜೈನ ಅರಸರ ಆಳ್ವಿಕೆಯ ಕಾಲದಲ್ಲಿ ಇದು ಪಾಂಡ್ಯ ನಗರಿಯಾಗಿತ್ತು ಎನ್ನುತ್ತದೆ ಇತಿಹಾಸ. ಇಲ್ಲಿರುವ ಜೈನ ಬಸದಿಗಳು ಮತ್ತು ಗೋಮಟೇಶ್ವರನ ಮೂರ್ತಿಯಿಂದ ಕಾರ್ಕಳ 'ಜೈನ ತೀರ್ಥ' ಎಂದು ಪ್ರಸಿದ್ದವಾಗಿದೆ.
ಇಲ್ಲಿರುವ 42 ಅಡಿಗಳಷ್ಟು ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ, ಚತುರ್ಮುಖ ಬಸದಿ, ಪುರಾಣ ಪ್ರಸಿದ್ದ ಅನಂತಶಯನ ದೇವಾಲಯ ಹಾಗೂ ಇತರೆ ಅನೇಕ ಸುಂದರ ಸ್ಮಾರಕಗಳಿದ್ದು ಅವೆಲ್ಲವೂ ಸಹ ಪ್ರವಾಸಿ ದೃಷ್ಟಿಯಿಂದ ಮಹತ್ವ ಪಡೆದು ಇಂದಿಗೂ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತಮ್ಮತ್ತ ಆಕರ್ಷಿಸುತ್ತಿವೆ.

ಕೆಲವು ದಿನಗಳ ಹಿಂದೆ ಸುಮಾರು ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ಇಲ್ಲಿ (ಬೈಲೂರು) ಪರಶುರಾಮ ಥೀಂ ಪಾರ್ಕ್ ಮತ್ತು 33 ಅಡಿ ಎತ್ತರದ ಕಂಚಿನ ಮೂರ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದರು.
ಕ್ಷೇತ್ರದ ಜನರ ಪ್ರಮುಖ ಉದ್ಯೋಗ ಕೃಷಿಯಾಗಿದೆ. ಭತ್ತ, ಅಡಿಕೆ, ತೆಂಗಿನಕಾಯಿ ಬೆಳೆ ಇಲ್ಲಿನ ಪ್ರಮುಖ ಆದಾಯ ಮತ್ತು ವ್ಯಾಪಾರೋದ್ಯಮಕ್ಕೆ ಉತ್ತಮ ಮೂಲ ಸೌಕರ್ಯವನ್ನು ಹೊಂದಿದೆ. ಜಿಲ್ಲಾ ಕೇಂದ್ರ ಉಡುಪಿಯಿಂದ ಕಾರ್ಕಳ ನಲವತ್ತು ಕಿ.ಮೀ ದೂರದಲ್ಲಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರ ಹಲವು ಕಾರಣಗಳಿಂದ ಈ ಬಾರಿಯ ಚುನಾವಣೆಯಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಕಾರಣ, ಸ್ಥಳೀಯವಾಗಿ ಇದೆ ಎನ್ನಲಾಗುತ್ತಿರುವ ಬಿಜೆಪಿಯ ಆಂತರಿಕ ಮನಸ್ತಾಪಗಳು.

ಈ ಕ್ಷೇತ್ರವನ್ನು ಸತತ ಎರಡು ಬಾರಿ ಪ್ರತಿನಿಧಿಸುತ್ತಿರುವುದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್. ಒಂದು ಕಾಲದಲ್ಲಿ ಅವರ ಗುರುವಾಗಿದ್ದ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಈ ಬಾರಿಯ ಸುನೀಲ್ ವಿರುದ್ದ ತೊಡೆತಟ್ಟಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಬಾರಿ ಅಂದರೆ 2018ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಪುತ್ರ ಹರ್ಷ, ಸುನೀಲ್ ಕುಮಾರ್ ವಿರುದ್ದ ಸ್ಪರ್ಧಿಸುತ್ತಾರೆ ಎಂದು ಸುದ್ದಿಯಾಗಿತ್ತು. ಈ ಬಾರಿಯೂ ಅದೇ ಸುದ್ದಿ ಚಾಲ್ತಿಯಲ್ಲಿತ್ತು, ಅದಕ್ಕೆ ಖುದ್ದು ಮೊಯ್ಲಿಯವರೇ ಸ್ಪಷ್ಟನೆ ನೀಡಿ, ನಾನಾಗಲಿ ನನ್ನ ಪುತ್ರನಾಗಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಪ್ರಮೋದ್ ಮುತಾಲಿಕ್ ಅವರ ಸ್ಪರ್ಧೆಗೆ ಸಂಘಟನೆಯೊಳಗೆ ಭಿನ್ನಮತ ಭುಗಿಲೆದ್ದಿದ್ದು, ಶ್ರೀರಾಮಸೇನೆ ಮಂಗಳೂರು ವಿಭಾಗದಿಂದ ಅವರ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದೆ. ಸೋಲು ಕಟ್ಟಿಟ್ಟಬುತ್ತಿ ಎಂದಿರುವಾಗ ವೃಥಾ ಸ್ಪರ್ಧೆ ಏಕೆ ಎನ್ನುವ ಕೂಗು ಜೋರಾಗಿದೆ.
'ಸ್ವಂತ ಬುದ್ಧಿಯಿಂದ ನೀವು ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ನೀವು ಕಾರ್ಕಳದಿಂದ ಸ್ಪರ್ಧೆಗೆ ಇಳಿಯುವುದನ್ನು ನಾನು ಮೊದಲೇ ಸ್ವಾಗತಿಸಿದ್ದೇನೆ. ಈಗ ನಿಮಗೆ ತನು ಮನ ಧನ ಸಹಾಯ ಮಾಡುವವರೂ ಕಾರ್ಕಳಕ್ಕೆ ಬಂದು ಪ್ರಚಾರ ಮಾಡಲಿ ಎಂದು ನಾನು ಆಶಿಸುತ್ತೇನೆ' ಎಂದು ಸುನೀಲ್ ಕುಮಾರ್ ಟ್ವೀಟ್ ಮಾಡುವ ಮೂಲಕ, ಬಿಜೆಪಿಯ ಒಂದು ಬಣಕ್ಕೆ ಪರೋಕ್ಷವಾಗಿ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

2008ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎಚ್.ಗೋಪಾಲ ಭಂಡಾರಿ ವಿರುದ್ದ 1,537 ಮತಗಳ ಅಂತರದಿಂದ ಪರಾಭವಗೊಂಡಿದ್ದ ಸುನೀಲ್ ಕುಮಾರ್, 2013ರ ಚುನಾವಣೆಯಲ್ಲಿ 4,254 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ 42,566 ಮತಗಳ ಭಾರೀ ಅಂತರದಿಂದ ಸುನೀಲ್ ಗೆಲುವನ್ನು ಸಾಧಿಸಿದ್ದರು.
ಮಾಹಿತಿಯ ಪ್ರಕಾರ ಬಿಜೆಪಿಯಲ್ಲಿ ಸುನೀಲ್ ಕುಮಾರ್ ಒಬ್ಬರೇ ಟಿಕೆಟ್ ಆಕಾಂಕ್ಷಿ. ಇನ್ನು, ಪಕ್ಷೇತರರಾಗಿ ಪ್ರಮೋದ್ ಮುತಾಲಿಕ್, ಕಾಂಗ್ರೆಸ್ಸಿನಿಂದ ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ವಾಣಿಜ್ಯೋದ್ಯಮಿ ಸುರೇಂದ್ರ ಶೆಟ್ಟಿ ಮತ್ತು ಡಿ.ಆರ್.ರಾಜು ಅರ್ಜಿಯನ್ನು ಸಲ್ಲಿಸಿದ್ದಾರೆ.
ಕ್ಷೇತ್ರದ ಮತದಾರ ವಿವರ (2018ರ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ)
ಕ್ಷೇತ್ರದ ಕೋಡ್: 122
ಪುರುಷರು: 86,735
ಮಹಿಳೆಯರು: 94,294
ಇತರರು: 02
ಒಟ್ಟು: 1,81,031












Click it and Unblock the Notifications