ಉಡುಪಿ ಮಠದಲ್ಲಿ ಇಫ್ತಾರ್, ಮಸೀದಿಯಲ್ಲಿ ಜನ್ಮಾಷ್ಟಮಿಯೂ ನಡೆಯಲಿ!
ಇಫ್ತಾರ್ ಕೂಟ ಉಡುಪಿ ಮಠದ ಆವರಣದಲ್ಲಿ ನಡೆಸಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಪೇಜಾವರ ಶ್ರೀಗಳು ಹೊಸ ಷರಾ ಬರೆದಿದ್ದಾರೆ. ಜೊತೆಗೆ, ಜನ್ಮಾಷ್ಠಮಿಯ ಮೊಸರುಕೊಡಿಕೆ ಉತ್ಸವ ಮಸೀದಿಯಲ್ಲೂ ನಡೆದು ಎರಡು ಕೋಮಿನ ಕೋಮು ಸೌಹಾರ್ದತೆಗೆ ಇನ್ನಷ್ಟು ಶಕ್ತಿತುಂ
ಉಡುಪಿ ಶ್ರೀಕೃಷ್ಣಮಠದ ಇತಿಹಾಸದಲ್ಲೇ ಇದೇ ಮೊದಲು ಎನ್ನಬಹುದಾದ ಪವಿತ್ರ ರಂಜಾನ್ ಮಾಸದ ಇಫ್ತಾರ್ ಕೂಟ ಮಠದ ಆವರಣದಲ್ಲಿ ನಡೆದು, ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಅಪರೂಪ ಎನ್ನಬಹುದಾದ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಪೇಜಾವರ ಶ್ರೀಗಳು ಹೊಸ ಮುನ್ನುಡಿ ಬರೆದಿದ್ದಾರೆ.
ವಿಶ್ವಹಿಂದೂ ಪರಿಷತ್ ಸಂಘಟನೆಯ ಮಾರ್ಗದರ್ಶಕರೂ ಆಗಿರುವ ಪೇಜಾವರ ಹಿರಿಯ ಯತಿಗಳ 'ಇಫ್ತಾರ್' ನಡೆ ಹೊಸ ಚರ್ಚೆಗೆ ನಾಂದಿ ಹಾಡಿರುವುದು ಒಂದೆಡೆಯಾದರೆ, ಹಿಂದೂ ಸಮುದಾಯ, ಹಿಂದೂಪರ ಸಂಘಟನೆಗಳಲ್ಲಿನ ವಿರೋಧ ಮತ್ತು ಅಷ್ಠಮಠಗಳಲ್ಲೂ ಭಿನ್ನಾಭಿಪ್ರಾಯ ಮೂಡಿಸುವಂತೆ ಮಾಡಿದೆ.
ಪಕ್ಕದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ ಅಶಾಂತಿಯ ಬೆಂಕಿ ಜ್ವಾಲೆಯಾಗಿ ಹರಡುತ್ತಿರುವ ಈ ವೇಳೆ ಪೇಜಾವರ ಶ್ರೀಗಳ ಈ ನಡೆಯಿಂದ ಕೆಲವೊಂದು ಹಿಂದೂಪರ ಸಂಘಟನೆಗಳ ಬೇಸರಿಸಿಕೊಂಡಿರುವುದಕ್ಕೆ ಕಾರಣ ಇಲ್ಲದಿಲ್ಲ, ಯಾಕೆಂದರೆ ಪ್ರಮೋದ್ ಮುತಾಲಿಕ್ ಹೇಳುವಂತೆ ಪೇಜಾವರರು ಬರೀ ಕೃಷ್ಣಮಠಕ್ಕೆ ಸೀಮಿತರಾದವರಲ್ಲ, ಅವರು ಹಿಂದೂ ಸಂಘಟನೆಗಳ ಮಾರ್ಗದರ್ಶಕರು.
ಗೋ ಹಂತಕರನ್ನು ಮಠದ ಒಳಗಡೆ ಕರೆಸಿ ಮಾನ್ಯತೆ ಕೊಡುವ ಶ್ರೀಗಳ ನಡೆ ಒಪ್ಪುವಂತಹದಲ್ಲ ಎನ್ನುವ ಮುತಾಲಿಕ್ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದ ಪೇಜಾವರರು, ಸೌಹಾರ್ದ ಕೂಟಕ್ಕೆ ಹಿಂದೂ ಮುಸ್ಲಿಂ ಮತೀಯ ಸ್ವರೂಪ ನೀಡಿ ಅನವಶ್ಯಕವಾಗಿ ಜನರ ಮನಸ್ಸುಗಳನ್ನು ಕೆಡಿಸುವ ಪ್ರಯತ್ನ ಮಾಡಬೇಡಿ ಎಂದಿದ್ದಾರೆ.
ಕರಾವಳಿ ಭಾಗದಲ್ಲಿ ಎಲ್ಲಾ ಕೋಮಿನವರು ಗೌರವಿಸುವ ಧಾರ್ಮಿಕ ಮುಖಂಡರಾಗಿರುವ ಪೇಜಾವರ ಶ್ರೀಗಳ, ಮಠದಲ್ಲಿ ಇಫ್ತಾರ್ ಆಯೋಜನೆ ವ್ಯಾಪಕ ಚರ್ಚೆಗೊಳಗಾಗಿದ್ದು, ಉಡುಪಿಯಲ್ಲಿ ಸಂಭ್ರಮದಿಂದ ನಡೆಯುವ ಜನ್ಮಾಷ್ಟಮಿಯ ಮೊಸರುಕೊಡಿಕೆ ಉತ್ಸವ ಮಸೀದಿಯಲ್ಲೂ ನಡೆಯಲು ಮುಸ್ಲಿಂ ಧಾರ್ಮಿಕ ಮುಖಂಡರು ಒಪ್ಪುತ್ತಾರಾ ಎನ್ನುವುದು ಈಗ ಕೇಳಿಬರುತ್ತಿರುವ ಪ್ರಶ್ನೆ. ಮುಂದೆ ಓದಿ..

ಗೋಮಾಂಸ ತಿನ್ನುವ ಹಿಂದೂಗಳೂ ಇದ್ದಾರೆ
ಗೋಮಾಂಸ ತಿನ್ನಬೇಡಿ ಎಂದಷ್ಟೇ ನಾವು ಹೇಳಬಹುದು, ಆದರೆ ಬಲವಂತ ಮಾಡಲು ಸಾಧ್ಯವಿಲ್ಲ. ಹಿಂದೂಗಳಲ್ಲೂ ಗೋಮಾಂಸ ತಿನ್ನುವವರು ಇಲ್ಲವೇ ಎನ್ನುವ ಪೇಜಾವರರ ಹೇಳಿಕೆ, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿರುವುದು ಒಂದೆಡೆ, ಜೊತೆಗೆ ಹಲವು ಪೀಠಾಧಿಪತಿಗಳೂ ಪೇಜಾವರ ಶ್ರೀಗಳ ಹೇಳಿಕೆಗೆ ಸಹಮತವನ್ನು ವ್ಯಕ್ತಪಡಿಸುತ್ತಿಲ್ಲ.

ಆಚಾರ್ಯ ಮಧ್ವರ ಸಂಪ್ರದಾಯ
ಉಡುಪಿ ಅಷ್ಟಮಠಗಳ ಯತಿಗಳ ಪೈಕಿ ಆಚಾರ್ಯ ಮಧ್ವರು ಹಾಕಿಕೊಟ್ಟಿರುವ ಸಂಪ್ರದಾಯಗಳನ್ನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿರುವ ಸ್ವಾಮೀಜಿಗಳಿದ್ದಾರೆ. ಅಡ್ಡಪಲ್ಲಕ್ಕಿ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ ಪೇಜಾವರರ ಪಂಚಮ ಪರ್ಯಾಯದ ವೇಳೆ ಪಲ್ಲಕ್ಕಿಯಲ್ಲಿ ಕೂತೇ ಮೆರವಣಿಗೆಯಲ್ಲಿ ಒಂದೆರಡು ಶ್ರೀಗಳು ಬಂದಿದ್ದರು. ಹೀಗಿರುವಾಗ, ಇಫ್ತಾರ್ ಬಗ್ಗೆ ಈ ಶ್ರೀಗಳ ವಿರೋಧ ಇಲ್ಲದೇ ಇರುತ್ತದೆಯೇ?

ಮುಂದಿನ ಶ್ರೀಗಳು ಅವಕಾಶ ನೀಡಬೇಕು ಎಂದೇನಿಲ್ಲ
ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀಕೃಷ್ಣಮಠದ ಪೂಜಾ ಹಸ್ತಾಂತರದ (ಪರ್ಯಾಯ) ನಂತರ, ಮಠದ ಆಡಳಿತ ಆಯಾಯ ಮಠಕ್ಕೆ ಸಂಬಂಧಿಸಿದ್ದು. ಪೇಜಾವರರು ನಾಂದಿ ಹಾಡಿದ ಹೊಸ ಪದ್ದತಿಗೆ ಪರ್ಯಾಯದಲ್ಲಿರುವ ಇತರ ಮಠಗಳು ಅವಕಾಶ ಕಲ್ಪಿಸಲೇ ಬೇಕು ಎಂದೇನಿಲ್ಲ. ಹಾಗಾಗಿ, ಒಂದು ವೇಳೆ ಇತರ ಮಠಗಳು ಇಫ್ತಾರ್ ಗೆ ಅವಕಾಶ ನೀಡದೇ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಇದೊಂದು ಅನಾವಶ್ಯಕ ಗೊಂದಲ, ಮನಸ್ತಾಪಕ್ಕೆ ಕಾರಣವಾಗದೇ ಇರದು.

ಉಡುಪಿ ಚಲೋ ವೇಳೆ ಮಠದ ಬೆಂಬಲಕ್ಕೆ ನಿಂತ ಸಂಘಟನೆಗಳು
ಕೆಲವು ತಿಂಗಳ ಹಿಂದೆ ನಡೆದ 'ಉಡುಪಿ ಚಲೋ' ವೇಳೆ, ಉಡುಪಿ ಭಾಗದ ಹಲವು ಸ್ಥಳೀಯ ಮುಸ್ಲಿಂ ಸಂಘಟನೆಗಳು ಶ್ರೀಗಳ ಪರವಾಗಿ ನಿಂತಿದ್ದವು. ರಂಜಾನ್ ಪ್ರಾರ್ಥನೆಗೆ ಮಠದಲ್ಲಿ ಅವಕಾಶ ನೀಡಬೇಕೆಂದು ಮನವಿ ಮೇರೆಗೆ ಅವಕಾಶ ನೀಡಲಾಯಿತು ಎನ್ನುವುದು ಪೇಜಾವರ ಶ್ರೀಗಳ ಸ್ಪಷ್ಟೀಕರಣದಲ್ಲಿ ಉಲ್ಲೇಖವಾಗಿದೆ.

ಶ್ರೀಗಳು ಎರಡು ದೋಣಿಯಲ್ಲಿ ಕಾಲಿಡುತ್ತಿದ್ದಾರೆಯೇ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕೆಲಸ ಆರಂಭವಾಗುವ ದಿನಾಂಕವನ್ನು ಉಡುಪಿಯಲ್ಲಿ ಘೋಷಿಸಲಾಗುವುದೆಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ನವೆಂಬರ್ ತಿಂಗಳಲ್ಲಿ ನಡೆಯಲಿರುವ ಸಂತ ಸಮ್ಮೇಳನಕ್ಕೆ ಪೇಜಾವರ ಶ್ರೀಗಳೇ ವೇದಿಕೆ ಕಲ್ಪಿಸಿದ್ದಾರೆ. ಬಹುತೇಕ ಮುಸ್ಲಿಂ ಸಮುದಾಯದ ವಿರೋಧ ಕಟ್ಟಿಕೊಳ್ಳಬಹುದಾದ ಅಯೋಧ್ಯ ವಿಚಾರ, ಮಠದಲ್ಲಿ ಇಫ್ತಾರ್ ಆಯೋಜನೆ, ಪೇಜಾವರ ಶ್ರೀಗಳು ಎರಡು ದೋಣಿಯಲ್ಲಿ ಕಾಲಿಡುತ್ತಿದ್ದಾರೆಯೇ ಎನ್ನುವುದು ಇಲ್ಲಿ ಪ್ರಶ್ನೆ.

ಹಿಂದೂ-ಮುಸ್ಲಿಂ ಭಾಯಿ ಭಾಯಿ
ಒಟ್ಟಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಪೇಜಾವರ ಶ್ರೀಗಳು ಹೊಸ ನಾಂದಿ ಹಾಡಿದ್ದಾರೆ. ಆ ಮೂಲಕ ಎರಡು ಕೋಮಿನ ಕೋಮು ಸೌಹಾರ್ದತೆಗೆ ಇನ್ನಷ್ಟು ಶಕ್ತಿತುಂಬಲಿ. ಜೊತೆಗೆ, ಮುಸ್ಲಿಮರೂ ಹೊಸ ಪದ್ದತಿ ಆರಂಭಿಸಿ, ಸದ್ಯ ಈ ಭಾಗದಲ್ಲಿ ಅಗತ್ಯವಾಗಿ ಬೇಕಾಗಿರುವ ಶಾಂತಿ, ಸಾಮರಸ್ಯ ನೆಲೆಸುವಂತಾಗಲಿ ಎನ್ನುವುದೇ ಎಲ್ಲರ ಆಶಯ.












Click it and Unblock the Notifications