'ಹಲಾಲ್, ಅವರವರ ಪದ್ದತಿ ಮುಂದುವರಿಯಲಿ': ಈಶ್ವರಪ್ಪ ಆಶ್ಚರ್ಯಕರ ಹೇಳಿಕೆ
ಉಡುಪಿ, ಏಪ್ರಿಲ್ 3: ಬೊಮ್ಮಾಯಿ ಸರಕಾರದ ಹಲವು ಸಚಿವರು, ಬಿಜೆಪಿಯ ಮುಖಂಡರು, ಸಂಘ ಪರಿವಾರದ ಸದಸ್ಯರು ಹಲಾಲ್ ಕಟ್ ನಿಷೇಧಗೊಳ್ಲಬೇಕು ಎಂದು ಹೇಳುತ್ತಿದ್ದರೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದಾರೆ.
Recommended Video

ಜಿಲ್ಲೆಯ ಕಾರ್ಕಳ ತಾಲೂಕಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಈಶ್ವರಪ್ಪ, "ಕೆಲವು ಸಂಘಟನೆಗಳು ರಾಜಕೀಯ ಪಕ್ಷಗಳ ಪ್ರಚೋದನೆಯಂತೆ ಸಮಾಜದಲ್ಲಿ ಸಾಮರಸ್ಯ ಕದಡುತ್ತಿವೆ"ಎಂದು ಹೇಳಿದ್ದಾರೆ.
"ಹಲಾಲ್ ಮತ್ತು ಜಟ್ಕಾ ಕಟ್ ವಿಚಾರದಲ್ಲಿ ನನ್ನ ನಿಲುವು ಇಷ್ಟೇ.. ಅವರು ಹಲಾಲ್ ಕಟ್ ಮಾಡುವುದಾದರೆ ಮಾಡಲಿ. ಹಿಂದೂಗಳು ಜಟ್ಕಾ ಮಾಡುವುದಾದರೆ ಮಾಡಿಕೊಂಡು ಹೋಗಲಿ. ಊಟ ಮತ್ತು ಪದ್ದತಿ, ಅವರವರ ಸಂಪ್ರದಾಯದಂತೆ ಮುಂದುವರಿದುಕೊಂಡು ಹೋಗಲಿ" ಎಂದು ಕೆ.ಎಸ್ ಈಶ್ವರಪ್ಪ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

"ಹಲಾಲ್ ಕಟ್ ಮಾಂಸ ತೆಗೆದುಕೊಳ್ಳಬೇಕೆಂದು ಯಾರಾದರೂ ಮನೆ ಬಾಗಿಲಿಗೆ ಬಂದು ಒತ್ತಡ ಹಾಕುತ್ತಾರಾ? ಜಟ್ಕಾ ಕಟ್ ತೆಗೆದುಕೊಳ್ಳಬೇಕೆಂದೂ ಯಾರೂ ಬಲವಂತ ಮಾಡುವುದಿಲ್ಲ. ಸುಮ್ಮನೆ, ಇಂತಹ ವಿಚಾರವನ್ನು ಇಟ್ಟುಕೊಂಡು ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸವಾಗಬಾರದು"ಎಂದು ಈಶ್ವರಪ್ಪ ಹೇಳಿದ್ದಾರೆ.
"ಇಂತಹ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ನಾನೂ ಮಾಂಸ ತಿನ್ನುತ್ತೇನೆ, ಮಂಗಳವಾರದ ದಿನ ಬೇಡವೆಂದರೂ ನನಗೆ ಮಾಂಸ ಬೇಕೇ ಬೇಕು. ಅವರವರ ದೇವರು, ಪದ್ದತಿ, ಊಟ ಮಾಡಿಕೊಂಡು ಹೋಗಲಿ"ಎಂದು ಈಶ್ವರಪ್ಪ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.
"ರಾಜಕಾರಣ ಬೇರೆ, ಚುನಾವಣೆಯ ಸಮಯದಲ್ಲಿ ತೊಡೆ ತಟ್ಟೋಣ, ಇಂತಹ ವಿಷಯದಲ್ಲಿ ರಾಜಕೀಯ ಬೆರೆಸಬಾರದು. ಇದನ್ನೆಲ್ಲಾ ಕೆಲವೊಂದು ರಾಜಕೀಯ ಪಕ್ಷವೊಂದು ಹುಟ್ಟುಹಾಕಿತು, ಈಗ ಕರ್ನಾಟಕದ ಜನ ಇವರ ಆಟದಿಂದ ಅನುಭವಿಸುತ್ತಿದ್ದಾರೆ"ಎಂದು ಕಾಂಗ್ರೆಸ್ ಪಕ್ಷವನ್ನು ಉಲ್ಲೇಖಿಸಿ ಕಿಡಿಕಾರಿದರು.
"ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಇಂತದ್ದೇ ವಿಚಾರ ಬೇಕು. ಇವರ ಮತ್ತು ಕಾಂಗ್ರೆಸ್ ಪಕ್ಷದ ನಿಲುವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಯಾರು ಏನು ಬೇಕಾದರೂ ತಿನ್ನಿಕೊಳ್ಳಲಿ, ಕಾಂಗ್ರೆಸ್ಸಿಗರಿಗೆ ಇದರಿಂದ ತೊಂದರೆ ಏನು" ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.












Click it and Unblock the Notifications