ರಾಜಕೀಯಕ್ಕೆ ಗ್ಯಾರಂಟಿ ಲಾಭವಾಗುವ ನಿರೀಕ್ಷೆ ಇತ್ತು: ಗೃಹ ಸಚಿವ ಜಿ.ಪರಮೇಶ್ವರ್
ಉಡುಪಿ, ಜೂನ್ 06: ಲೋಕಸಭಾ ಚುನಾವಣೆಯಲ್ಲಿ ಬಹಳಷ್ಟು ಕಡೆ ನಾವು ಸೋತಿದ್ದೇವೆ. ಸೋಲಿನ ವಿಶ್ಲೇಷಣೆ ಹಾಗೂ ಆತ್ಮಾವಲೋಕನ ಮಾಡಬೇಕಿದೆ. ಯಾಕೆ ಸೋತಿದ್ದೇವೆ ಎಲ್ಲಿ ಎಡವಿದ್ದೇವೆ ಎನ್ನುವುದು ಚರ್ಚೆಯಾಗಬೇಕಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರ ಬಡತನ ನಿರ್ಮೂಲನೆಗಾಗಿ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೆವು. ಜನಕ್ಕೆ ಗ್ಯಾರಂಟಿ ತಲುಪಿದೆ. ಎಲ್ಲಾ ಯೋಜನೆ ಅನುಷ್ಠಾನ ಆಗಿದೆ. ರಾಜಕೀಯಕ್ಕೆ ಗ್ಯಾರಂಟಿ ಲಾಭ ಆಗಬಹುದು ಎಂಬ ನಿರೀಕ್ಷೆ ಇತ್ತು.

ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ನಾನು ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಸೋಲಿನ ಬಗ್ಗೆ ಸಮಿತಿ ಮಾಡಿ, ಹಿರಿಯರು ಅನುಭವಿಗಳ ವಿಶ್ಲೇಷಣೆ ಮಾಡಲು ತೀರ್ಮಾನಿಸಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರಿಗೆ ಲೆಕ್ಕ ಕೊಡಬೇಕಾಗುತ್ತದೆ. ಸಮಿತಿ ರಚನೆಯಾಗಿ ನಡೆಯುವ ಚರ್ಚೆಯಲ್ಲಿ ರಣದೀಪ್ ಸುರ್ಜೇವಾಲಾ ಕೂಡ ಭಾಗಿಯಾಗಬಹುದು ಎಂದರು.
ಸರ್ಕಾರದ ಗ್ಯಾರಂಟಿಗಳು ನಿಲ್ಲುತ್ತದೆ ಎನ್ನುವ ವದಂತಿ ಬಗ್ಗೆ ಮಾತನಾಡಿದ ಜಿ.ಪರಮೇಶ್ವರ್, ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಗ್ಯಾರಂಟಿ ರಾಜಕೀಯ ಉದ್ದೇಶಕ್ಕಲ್ಲ. ಪಟ್ಟಣ ಪ್ರದೇಶದಲ್ಲಿ ಗ್ಯಾರಂಟಿ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ ಹಳ್ಳಿ, ಗ್ರಾಮೀಣ ಭಾಗದ ಜನಕ್ಕೆ ಈ ಯೋಜನೆ ಉಪಯೋಗವಾಗುತ್ತಿದೆ. ಗ್ಯಾರಂಟಿ ಜೊತೆ ಅಭಿವೃದ್ಧಿ ಕಾರ್ಯ ಕೂಡಾ ಮಾಡುತ್ತೇವೆ. ರಾಜ್ಯದ ಬಜೆಟ್ ಗಾತ್ರ ಹಿಗ್ಗಿದೆ ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆ ಇದೆ. ಹಣಕಾಸು ಮತ್ತು ವಿವಿಧ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆ ಬಗ್ಗೆ ಮಾತನಾಡಿದ ಅವರು, ಎನ್‌ಡಿಎ ಎಷ್ಟು ಸುಭದ್ರ ಎಂದು ಕಾದು ನೋಡೋಣ. ಎನ್‌ಡಿಎ 400 ಸೀಟ್ ಬರುತ್ತದೆ ಎಂದು ನಿರೀಕ್ಷಿಸಿದ್ದರು. ಜನ ಬಿಜೆಪಿ ಹಾಗೂ ಎನ್‌ಡಿಎಯನ್ನು ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್‌ನ ವೋಟ್ ಶೇರ್ ಹೆಚ್ಚಾಗಿದೆ. ಬಿಜೆಪಿಯವರು ನಿರೀಕ್ಷೆ ತಲುಪಿಲ್ಲ, ನಾವು ನಮ್ಮ ನಿರೀಕ್ಷೆಗೂ ತಲುಪಿಲ್ಲ. ಕಾಂಗ್ರೆಸ್ ಸ್ವಲ್ಪ ಫೈನ್ ಟ್ಯೂನಿಂಗ್ ಮಾಡಿಕೊಳ್ಳಬೇಕಾಗುತ್ತದೆ. ಮುಂದಿನ ದಿನದಲ್ಲಿ ಮಾಡುತ್ತೇವೆ ಎಂದರು.












Click it and Unblock the Notifications