ಉಡುಪಿಯಲ್ಲಿ ಪರಿಸರ ದಿನದಂದೇ ಮರಗಳ ಹನನ
ಉಡುಪಿ, ಜೂನ್ 06: ವಿಶ್ವ ಪರಿಸರ ದಿನದಂದೇ ಮರಗಳನ್ನು ಕಡಿದು ಹಾಕಿದ ಘಟನೆ ಉಡುಪಿಯಲ್ಲಿ ನಡೆದಿದೆ. ನಿನ್ನೆ ಪರಿಸರ ದಿನಕ್ಕಾಗಿ ಎಲ್ಲೆಡೆ ಗಿಡ ನೆಡುತ್ತಿದ್ದರೆ, ಇಲ್ಲಿ ಮಾತ್ರ ಬೆಳೆದು ನಿಂತ ಹತ್ತಾರು ಮರಗಳನ್ನು ಕಡಿದುರುಳಿಸಿದ್ದು ನಗರದ ನಾಗರೀಕರ ಅಸಮಾಧಾನಕ್ಕೆ ಕಾರಣವಾಗಿದೆ.
ಉಡುಪಿ ನಗರದ ಸರಕಾರಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಅಡ್ಡವಾಗಿದೆ ಎಂಬ ನೆಪವೊಡ್ಡಿ ಮರಗಳ ಹನನ ನಡೆದಿದೆ. ಈ ಮೊದಲು ಮರಗಳನ್ನು ಬೇರೆ ಕಡೆ ಶಿಫ್ಟ್ ಮಾಡುತ್ತೇವೆ ಎಂದು ಅರಣ್ಯ ಸಚಿವರು ಭರವಸೆ ಕೊಟ್ಟು ಹೋಗಿದ್ದರು. ಆದರೆ ನಿನ್ನೆ ಮರ ಕತ್ತರಿಸುವ ಕೆಲಸಕ್ಕೆ ಯಾರೂ ಅಡ್ಡಿಪಡಿಸದಂತೆ ಗೇಟಿಗೆ ಬೀಗ ಜಡಿದು ಕಾರ್ಯಾಚರಣೆ ನಡೆಸಿ ಮರಗಳನ್ನು ಕಡಿಯಲಾಗಿದೆ.
ಪರಿಸರ ಸಂರಕ್ಷಣೆಗೆ ಹೋರಾಡುವ ಪುಟ್ಟ ಯೋಧರ ವಿಶೇಷ ವರದಿ
30 ವರ್ಷ ಹಳೆಯದಾದ ಸುಮಾರು 12 ಬೃಹತ್ ಮರಗಳನ್ನು ಅರಣ್ಯ ಇಲಾಖೆ ಕಡಿದಿದ್ದಾರೆ. ಮಾತ್ರವಲ್ಲ, ಪರಿಸರ ದಿನಾಚರಣೆಯ ದಿನವೇ ಅರಣ್ಯ ಇಲಾಖೆಯಿಂದ ಇಲಾಖೆಯ ಉದ್ದೇಶವನ್ನೇ ಅಣಕಿಸುವ ರೀತಿ ಈ ಕೆಲಸ ನಡೆದಿದ್ದಕ್ಕೆ ಇದರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.