ಉಡುಪಿಯಲ್ಲೊಂದು ಅಚ್ಚರಿ ಘಟನೆ: ದೈವದ ನುಡಿಯಂತೆ ಕೋರ್ಟ್‌ಗೆ ಶರಣಾದ ಕೊಲೆ ಆರೋಪಿ
ಉಡುಪಿ, ಮೇ 29: ಕಳೆದ ವರ್ಷ ಅಂದರೆ 2023 ಫೆಬ್ರವರಿಯಲ್ಲಿ ಕಾಪು ಸಮೀಪದ ಪಾಂಗಳ ಶ್ರೀ ಜನಾರ್ದನ ದೈವಸ್ಥಾನದ ಬಳಿ ಕೊಲೆಯಾಗಿತ್ತು. ಕಾಪು ಪಾಂಗಳ ಬಬ್ಬು ಸ್ವಾಮಿ ದೈವಸ್ಥಾನದ ನೇಮೋತ್ಸವದಲ್ಲಿ ಭಾಗಿಯಾಗಿದ್ದ ಶರತ್ ಶೆಟ್ಟಿಯನ್ನು ಫೋನ್ ಮಾಡಿ ಕರೆಸಿ ಕೊಲೆ ಮಾಡಲಾಗಿತ್ತು.
ಕೋಲ ನೋಡುತ್ತಿದ್ದ ಶರತ್ ಶೆಟ್ಟಿಗೆ ಕರೆ ಬಂದು ರಾಷ್ಟ್ರೀಯ ಹೆದ್ದಾರಿಗೆ ಬಂದು ನಿಂತಿದ್ದಾಗ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಭೂ ವ್ಯವಹಾರ ಸಹಿತ ಹಲವಾರು ವಹಿವಾಟು ನಡೆಸುತ್ತಿದ್ದ ಶರತ್ ಶೆಟ್ಟಿಗೆ ಇದ್ದ ದುಷ್ಮನಿಗೆ ಈ ಕೊಲೆಗೆ ಕಾರಣ ಎನ್ನಲಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಈ ಹತ್ಯೆಯ ಹಿಂದೆ ಭೂಗತ ಲೋಕದ ಕರಿ ನೆರಳು ಇರುವುದು ಪತ್ತೆ ಹಚ್ಚಿದರು.

ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನ ಕಲೆ ಹಾಕಿದ್ದರು ಕೂಡ ಹತ್ಯೆಯ ಪ್ರಮಖ ಅರೋಪಿ ಯೋಗಿಶ್ ಮಾತ್ರ ಪೊಲೀಸರ ಕೈಗೆ ಸಿಗಲಿಲ್ಲ. ಇದೇ ನೋವಿನಲ್ಲಿ ಶರತ್ ಶೆಟ್ಟಿ ಕುಟುಂಬದವರು ದೈವದ ಮೊರೆ ಹೋಗಿದ್ದರು, ಆರೋಪಿ ಎಲ್ಲೇ ಇದ್ದರೂ ಕೂಡ ಮುಂದೆ ನಿಲ್ಲಿಸುವುದಾಗಿ ದೈವದ ನುಡಿ ನೀಡಿತ್ತು.
ಆರೋಪಿಗಳ ಪತ್ತೆಗೆ ಕುಟುಂಬಸ್ಥರು ವರ್ತೆ ಪಂಜುರ್ಲಿ ದೈವಕ್ಕೆ ಕೋಲದ ಹರಕೆ ಹೊತ್ತಿದ್ದರು. ಮಾರ್ಚ್ 24 2023 ರಂದು ಶರತ್ ಶೆಟ್ಟಿ ಕುಟುಂಬಕರು ನ್ಯಾಯಕ್ಕಾಗಿ ಪಂಜುರ್ಲಿ ದೈವದ ಮೊರೆ ಹೋಗಿದ್ದರು. ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಯೋಗೀಶ್ ಆಚಾರ್ಯ ಯಾರ ಕೈಗೂ ಸಿಗದೆ ತಲೆತಪ್ಪಿಸಿಕೊಂಡು ಓಡಾಡಿಕೊಂಡಿದ್ದ.

ಕೋಲದಲ್ಲಿ ಪಂಜುರ್ಲಿ ದೈವವು ಆರೋಪಿಯನ್ನು ತಂದು ನಿಲ್ಲಿಸುತ್ತೇನೆ ಎಂದು ಹೇಳಿದ ಹಿನ್ನೆಲೆಯಲ್ಲಿ ಕುಟುಂಬಿಕರು ಆರೋಪಿ ಬಂಧನದ ನಿರೀಕ್ಷೆಯಲ್ಲಿದ್ದರು. ಈ ನಿರೀಕ್ಷೆ ಈಗ ಸತ್ಯವಾಗಿದೆ. ದೈವದ ಅಭಯದ ಬಳಿಕ 15 ತಿಂಗಳುಗಳು ಕಳೆದ ನಂತರ ಪ್ರಕರಣದ ಪ್ರಮುಖ ಆರೋಪಿ ಯೋಗಿಶ್ ತಾನಾಗಿಯೇ ಬಂದು ಕೋರ್ಟಿಗೆ ಶರಣಾಗಿದ್ದಾನೆ.
ಊರೆಲ್ಲ ಹುಡುಗಾಡಿದರು ಸಿಗದ ಆರೋಪಿಯನ್ನು ಪಂಜುರ್ಲಿ ದೈವ ಕೋರ್ಟ್‌ನ ಮುಂದೆ ತಂದು ನಿಲ್ಲಿಸಿದ್ದು ಮಾತ್ರ ದೈವದ ಮಹಿಮೆ ಎಂದು ಶರತ್ ಶೆಟ್ಟಿ ಕುಟುಂಬಸ್ಥರು ಹಾಗೂ ಸ್ಥಳೀಯರು ನಂಬಿದ್ದಾರೆ. ಈ ಘಟನೆಯಿಂದ ಕರಾವಳಿಗರ ದೈವದ ಮೇಲಿನ ನಂಬಿಕೆ ಹೆಚ್ಚಾಗಿದೆ.












Click it and Unblock the Notifications