ಉಡುಪಿ; ಈದ್ ಮಿಲಾದ್ ಆಚರಣೆಗೆ ಮಾರ್ಗಸೂಚಿ ಪಾಲಿಸಲು ಡಿಸಿ ಆದೇಶ
ಉಡುಪಿ, ಅಕ್ಟೋಬರ್ 28: ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬವನ್ನು ಅಕ್ಟೋಬರ್ 29ರಂದು ಆಚರಿಸಲಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಬ್ಬದ ಆಚರಣೆ ಕುರಿತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕಿದ್ದು, ಜಿಲ್ಲೆಯಾದ್ಯಂತ ಈದ್ ಆಚರಿಸಲಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಸಾಮೂಹಿಕ ಮೆರವಣಿಗೆ (ಜುಲೂಸ್), ತೆರೆದ ಸ್ಥಳಗಳಲ್ಲಿ ಒಂದೆಡೆ ಸೇರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮೊಹಲ್ಲಾಗಳಲ್ಲಿ ಯಾವುದೇ ರೀತಿಯ ಪ್ರವಚನ ಕಾರ್ಯಕ್ರಮ/ಸಾಂಸ್ಕೃತಿಕ ಕಾರ್ಯಕ್ರಮ, ಸಭೆ ಸಮಾರಂಭಗಳನ್ನು ನಡೆಸದಂತೆ ನಿಷೇಧ ಹೇರಲಾಗಿದೆ.
ಮಸೀದಿಗಳಲ್ಲಿ, ದರ್ಗಾಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೋವಿಡ್-19ರ ಶಿಷ್ಟಾಚಾರದೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಹಬ್ಬ ಆಚರಿಸಬೇಕಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿ ವರ್ಧಕಗಳು/ಡಿಜಿಟಲ್ ಸೌಂಡ್ ಸಿಸ್ಟಮ್ (ಡಿಜೆ) ಬಳಕೆ ನಿಷೇಧಿಸಲಾಗಿದೆ.

ಮುಖಗವಸುಗಳನ್ನು ಕಡ್ಡಾಯವಾಗಿ ಎಲ್ಲರೂ ಉಪಯೋಗಿಸಬೇಕು. 60 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಹಬ್ಬದ ಆಚರಣೆ ಮಾಡಬೇಕು. ಖಬರಸ್ಥಾನ್ ಒಳಗೊಂಡಂತೆ ಯಾವುದೇ ರೀತಿಯ ತೆರೆದ ಜಾಗದಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರವಚನ ಮುಂತಾದವುಗಳನ್ನು ಆಯೋಜಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.












Click it and Unblock the Notifications