Rain Death: ಉಡುಪಿಯಲ್ಲಿ ಸಿಡಿಲು ಬಡಿದು ವಿದ್ಯಾರ್ಥಿ ದಾರುಣ ಸಾವು
ಉಡುಪಿ, ಮೇ 24: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಮೊದಲ ಮಳೆಯ ಅವಾಂತರಗಳು ಹೆಚ್ಚುತ್ತಿದ್ದು, ಈಗಾಗಲೇ ಐದಕ್ಕೂ ಹೆಚ್ಚು ಸಾವು ಸಂಭವಿಸಿದೆ. ಅದರಲ್ಲೂ ಸಿಡಿಲು ಬಡಿದು ಸಾವನ್ನಪ್ಪಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಇಂತಹದ್ದೇ ಮತ್ತೊಂದು ದುರ್ಘಟನೆ ನಡೆದಿದೆ.
ಸಿಡಿಲು ಬಡಿದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಶಿರ್ವ ಪಂಚಾಯತ್ ವ್ಯಾಪ್ತಿಯ ಮಾಣಿಬೆಟ್ಟು ಬಳಿ ನಡೆದಿದೆ. ಶಿರ್ವ ಮಾಣೆಬೆಟ್ಟು ನಿವಾಸಿ ರಕ್ಷಿತ್ ಪೂಜಾರಿ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ರಕ್ಷಿತ್ ಪೂಜಾರಿ ಶಿರ್ವ ಎಂಎಸ್‌ಆರ್ಎಸ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾನೆ.

ರಕ್ಷಿತ್ ಪೂಜಾರಿ ಗುರುವಾರ ಸಂಜೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಕ್ಷಿತ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನೆಲದಲ್ಲಿ ಬಿದ್ದಿದ್ದವನನ್ನು ಮನೆಯವರು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ರಕ್ಷಿತ್ ಪೂಜಾರಿ ಸಾವನ್ನಪ್ಪಿದ್ದಾನೆ. ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿಡಿಲು ಬಡಿದು ನವವಿವಾಹಿತ ದಾರುಣ ಸಾವು
ಮಂಗಳೂರು: ಮೇ 04 ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಈ ವೇಳೆ ಸಿಡಿಲು ಬಡಿದು ನವವಿವಾಹಿತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮ ಸುಂದರ್ (34) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸೋಮ ಸುಂದರ್ ಸಾವಿಗೂ ಹತ್ತು ದಿನದ ಹಿಂದೆಯಷ್ಟೇ ವಿವಾಹವಾಗಿದ್ದರು. ಶುಕ್ರವಾರ ಕಡಬ ತಾಲೂಕಿನ ಸುಬ್ರಹ್ಮಣ್ಯ ಭಾಗದಲ್ಲಿ ಏಕಾಏಕಿ ಮಳೆ ಆರಂಭವಾಗಿದ್ದು, ಗುಡುಗು ಸಿಡಿಲು ಕೂಡ ಜೋರಾಗಿತ್ತು.
ಮಳೆ ಹೆಚ್ಚಾಗಬಹುದು ಎಂದು ಸೋಮ ಸುಂದರ್ ಮನೆಯ ಅಂಗಳದಲ್ಲಿದ್ದ ಅಡಿಕೆ ರಾಶಿ ಮಾಡುತ್ತಿದ್ದರು. ಈ ವೇಳೆ ಸೋಮ ಸುಂದರ್‌ಗೆ ಸಿಡಿಲು ಬಡಿದಿದ್ದು ಸ್ಥಳದಲ್ಲೇ ತೀವ್ರ ಅಸ್ವಸ್ಥರಾಗಿದ್ದಾರೆ. ಕುಟುಂಬಸ್ಥರು ಕೂಡಲೇ ಸೋಮ ಸುಂದರ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ದುರಾದೃಷ್ಟವಶಾತ್ ಸೋಮ ಸುಂದರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications