ಉಡುಪಿಯಲ್ಲಿ ಸಿಎನ್‌ಜಿ ಕೊರತೆ: ಕೇಂದ್ರ ಸಚಿವರಿಗೆ ಪತ್ರ
ಉಡುಪಿ, ಮೇ 05: ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಇಂಧನದ ಕೊರತೆ ಉಂಟಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುತ್ತಿದ್ದು, ಇಂಧನ ಪೂರೈಕೆಯಾಗಿ ಕೇಂದ್ರ ಸಚಿವರಿಗೆ ಸಹ ಪತ್ರ ಬರೆಯಲಾಗಿದೆ. ಹೆಚ್ಚುವರಿ ಸಿಎನ್‌ಜಿ ಪೂರೈಕೆಗೆ ಸಹ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಿಎನ್‌ಜಿ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಇದರಿಂದಾಗಿ ವಾಹನ ಸವಾರರು ಅದರಲ್ಲೂ ಪ್ರಮುಖವಾಗಿ ಆಟೋ ಚಾಲಕರು ಹೈರಾಣಾಗಿ ಹೋಗಿದ್ದಾರೆ. ಆದ್ದರಿಂದ ಕೇಂದ್ರಕ್ಕೆ ಮನವಿ ಮಾಡಲಾಗಿದೆ.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಸಂಪನ್ಮೂಲ ಖಾತೆ ಸಚಿವ ಹಾರ್ದಿಕ್ ಸಿಂಗ್ ಪುರಿ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ಫೇಸ್ ಬುಕ್ ಪೋಸ್ಟ್: ಈ ಕುರಿತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಕೋಟ ಶ್ರೀನಿವಾಸ ಪೂಜಾರಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಅವರು, 'ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರು ಇತ್ಯಾದಿ ಪ್ರದೇಶಗಳಲ್ಲಿ ಸಿಎನ್‌ಜಿ ಗ್ಯಾಸ್‌ನ ಕೊರತೆಯಿಂದಾಗಿ ಬಂಕ್‌ಗಳ ಮುಂದೆ ವಾಹನಗಳು ಸರತಿ ಸಾಲಿನಲ್ಲಿ ನಿಂತು ಚಾಲಕರು ಮತ್ತು ಮಾಲಕರು ಸಂಕಷ್ಟಕ್ಕೆ ಈಡಾದ ಪರಸ್ಪರಿಸ್ಥಿತಿಯನ್ನು ಗಮನಿಸಲಾಗಿದೆ' ಎಂದು ಹೇಳಿದ್ದಾರೆ.
'ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಸಂಪನ್ಮೂಲ ಸಚಿವ ಹಾರ್ದಿಕ್ ಸಿಂಗ್ ಪುರಿ ಅವರಿಗೆ ಮನವಿ ಮಾಡಿ ಕೂಡಲೇ ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪತ್ರ ಬರೆದು ವಿನಂತಿ ಮಾಡಿಕೊಂಡಿದ್ದೇನೆ. ನಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಹಾರ್ದಿಕ್ ಸಿಂಗ್ ಪುರಿ ಅವರು ಸಮಸ್ಯೆ ಸಂಬಂಧ ಹೆಚ್ಚುವರಿ ಸಿಎನ್‌ಜಿಗ್ಯಾಸ್ ಪೂರೈಸಲು ಒಪ್ಪಿದ್ದಾರೆ' ಎಂದು ತಿಳಿದುಬಂದಿದೆ.
'ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಗ್ಯಾಸ್‌ನ ಸರಬರಾಜಿನ ಜವಾಬ್ದಾರಿ ಅದಾನಿ ಸಂಸ್ಥೆಯದಾಗಿದ್ದು, ತಾಂತ್ರಿಕ ತೊಂದರೆಯಿಂದ ಮತ್ತು ಹೆಚ್ಚುವರಿ ಬೇಡಿಕೆಯಿಂದಾಗಿ ಒಂದಷ್ಟು ಸಮಸ್ಯೆ ಆಗಿದೆ ಎಂದು ಸಂಸ್ಥೆ ಒಪ್ಪಿಕೊಂಡಿದೆ ಮತ್ತು ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಅಗತ್ಯ ಬೇಡಿಕೆ ಪರಿಶೀಲಿಸಿ ಪ್ರಸ್ತಾಪನೆ ಸಲ್ಲಿಸಲು ಉಡುಪಿ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಸೂಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಅದಾನಿ ಸಂಸ್ಥೆಯ ಮೂಲಕ ಸಿಎನ್‌ಜಿ ಬಂಕ್ ನಿರ್ಮಿಸಲು ಈ ಸಂದರ್ಭದಲ್ಲಿ ಮನವಿ ಮಾಡಿದ್ದೇನೆ' ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಬಂಕ್‌ಗಳ ಸಂಖ್ಯೆ ಕಡಿಮೆ ಇದೆ. ಈಗ ಸಿಎನ್‌ಜಿ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಗಿದ್ದು, ವಾಹನ ಸವಾರರು ಇಂಧನಕ್ಕಾಗಿ ಸಾಲುಗಟ್ಟಿ ನಿಲ್ಲುವಂತಾಗಿದೆ.
ಮಾಹಿತಿಗಳ ಪ್ರಕಾರ ಉಡುಪಿ ನಗರದಲ್ಲಿ 3 ಮತ್ತು ಕುಂದಾಪುರದಲ್ಲಿ 1 ಸಿಎನ್‌ಜಿ ಬಂಕ್‌ಗಳಿವೆ. ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಅಧಿಕ ಸಿಎನ್‌ಜಿ ವಾಹನಗಳಿದ್ದು, ಇಂಧನ ತುಂಬಿಸಲು ಸವಾರರು ಬೆಳಗ್ಗೆ 4 ಗಂಟೆಗೆ ಬಂಕ್ ಮುಂದೆ ಬಂದು ನಿಲ್ಲುವಂತಾಗಿದೆ. ವಾಹನಗಳ ಸಂಖ್ಯೆಗೆ ಆಧರಿಸಿ ಹೆಚ್ಚುವರಿ ಬಂಕ್ ತೆರೆಯುವಂತೆಯೂ ವಾಹನ ಸವಾರರು ಮನವಿಯನ್ನು ಮಾಡುತ್ತಿದ್ದಾರೆ.
ಸಿಎನ್‌ಜಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಜಿಲ್ಲೆಯ ವಿವಿಧ ಆಟೋ ರಿಕ್ಷಾ ಸಂಘಟನೆಗಳು ಉಡುಪಿ ಜಿಲ್ಲಾಧಿಕಾರಿಗಳಾದ ಡಾ. ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಕೆ ಮಾಡಿವೆ. ಜಿಲ್ಲೆಯ 4 ಕೇಂದ್ರಗಳಲ್ಲಿ ಪೂರೈಕೆ ಕೊರತೆಯ ಕಾರಣ ಇಂಧನ ಲಭ್ಯವಾಗುತ್ತಿಲ್ಲ. ಈ ಸಮಸ್ಯೆ ಕುರಿತು ಗಮನಹರಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಮತ್ತು ಸಂಬಂಧಿಸಿದ ಕಂಪನಿಗಳ ಜೊತೆ ಈ ಕುರಿತು ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ದಿನ ಪೂರ್ತಿ ಇಂಧನ ತುಂಬಿಸಲು ಸರತಿ ಸಾಲಿನಲ್ಲಿ ನಿಂತರೆ ದುಡಿಮೆ ಯಾವಾಗ ಮಾಡಬೇಕು? ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications