ನಂಬಿಸಿ ಮೋಸ ಮಾಡಿದ ಪ್ರಿಯತಮ: ಎಂಬಿಎ ಪದವೀಧರೆ ಆತ್ಮಹತ್ಯೆಗೆ ಶರಣು
ಉಡುಪಿ, ಆಗಸ್ಟ್ 26: ಪ್ರೀತಿಯ ನಾಟಕ ಮಾಡಿ, ಬಳಿಕ ತನ್ನನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ಯುವತಿಯೊಬ್ಬಳು ಅತ್ಮಹತ್ಯೆಗೆ ಶರಣಾಗಿದ್ದಾಳೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಯ್ಬರಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಕಾಜ್ರಳ್ಳಿ ನಿವಾಸಿ ಅನಿಶಾ. ಜಿ. ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ.
ಎಂಬಿಎ ಪದವೀಧರೆ ಸಾಯ್ಬರಕಟ್ಟೆ ಸಮೀಪದ ಕಾಜ್ರಳ್ಳಿ ನಿವಾಸಿ. ಅನಿಶಾ ಜಿ. ಪೂಜಾರಿ ಮತ್ತು ಚೇತನ್ ಶೆಟ್ಟಿ ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ ಮದುವೆಯ ಹಂತಕ್ಕೆ ಬಂದಾಗ ಚೇತನ್ ಮದುವೆಗೆ ಒಪ್ಪಿರಲಿಲ್ಲ.
ಆದರೆ ಅನಿಶಾ, ಚೇತನ್ ನ ಪ್ರೇಮಪಾಶದಲ್ಲಿ ಆಗಲೇ ಮುಳುಗಿ ಹೋಗಿದ್ದಳು. ತನ್ನನ್ನು ಮದುವೆಯಾಗು ಎಂದು ಅನಿಶಾ ಪರಿಪರಿಯಾಗಿ ಬೇಡಿಕೊಂಡರೂ ಚೇತನ್ ಶೆಟ್ಟಿ ತಲೆಕೆಡಿಸಿಕೊಂಡಿರಲಿಲ್ಲ.

ಕೊನೆಗೆ ಅನಿಶಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದರೂ ಕ್ಯಾರೇ ಎನ್ನಲಿಲ್ಲ. ಕೊನೆಗೆ ಅನಿಶಾ ನಾಲ್ಕು ಪುಟಗಳ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಚೇತನ್ ಗೆ ಸಂಬಂಧಪಟ್ಟ ಹಾಡಿಯಲ್ಲಿ ಯುವತಿ ನೇಣಿಗೆ ಶರಣಾಗಿದ್ದು, ಸಾವಿಗೆ ಮುನ್ನ ಪ್ರಿಯತಮ ತನ್ನನ್ನು ನಂಬಿಸಿ ಮೋಸ ಮಾಡಿರುವ ಬಗ್ಗೆ ಗೆಳತಿಗೆ ಸಂದೇಶಗಳನ್ನು ರವಾನಿಸಿದ್ದಾಳೆ. ತನ್ನ ಫೇಸ್ ಬುಕ್ ನಲ್ಲಿ ಚೇತನ್ ಒಬ್ಬ ಗರ್ಲ್ಸ್ ಹುಚ್ಚ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದಾಳೆ.
ಚೇತನ್ ಗೆ ಮದುವೆ ನಿಶ್ಚಯವಾಗಿದ್ದು, ಛತ್ರ ಬುಕ್ ಮಾಡಲು ಮುಂದಾಗಿದ್ದನು ಎಂಬ ಅಂಶ ಈಗ ಬಯಲಾಗಿದೆ. ಸದ್ಯ ಚೇತನ್ ತಲೆಮರೆಸಿಕೊಂಡಿದ್ದಾನೆ. ಬ್ರಹ್ಮಾವರ ಪೊಲೀಸರು ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದರು. ಆದರೆ ಬಿಲ್ಲವ ಸಂಘಟನೆ ಮಧ್ಯ ಪ್ರವೇಶದ ನಂತರ ಎಫ್ಐಆರ್ ದಾಖಲು ಮಾಡಿದ್ದಾರೆ.












Click it and Unblock the Notifications