13 ವರ್ಷದಿಂದ ಪ್ರೀತಿಸಿ ಮದುವೆ ದಿನವೇ ನಾಪತ್ತೆಯಾದ ವರ
ಉಡುಪಿ, ನವೆಂಬರ್ 09: ಹದಿಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗುವ ದಿನದಂದೇ ಯುವಕ ಪರಾರಿಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಹದಿಮೂರು ವರ್ಷಗಳಿಂದ ಪರ್ಕಳದ ಗಣೇಶ್ ಎಂಬಾತ ಮಮತಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ನವೆಂಬರ್ 6ಕ್ಕೆ ಮದುವೆ ಕೂಡ ನಿಶ್ಚಯವಾಗಿತ್ತು. ಆದರೆ ಮಂಟಪಕ್ಕೆ ಬರುವ ಮುನ್ನ, ಕೊನೇ ಕ್ಷಣದಲ್ಲಿ ಪರಾರಿಯಾಗಿದ್ದಾನೆ. ಮದುವೆ ಕಾರ್ಯವನ್ನು ರದ್ದುಗೊಳಿಸಿದ್ದು, ಯುವತಿ ಗಣೇಶನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.
ಗಣೇಶ್ ಆಕೆಯನ್ನು 13 ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗಿ ನಂಬಿಸಿದ್ದ. ದೈಹಿಕ ಸಂಪರ್ಕವನ್ನೂ ಹೊಂದಿದ್ದು, ಮೋಸ ಮಾಡಲು ಮುಂದಾಗಿದ್ದ ಎಂದು ಯುವತಿ ಮನೆಯವರು ಆರೋಪಿಸಿದ್ದಾರೆ. ವಿಷಯ ತಿಳಿದು ಯುವತಿ ಪೋಷಕರು ಮದುವೆ ಮಾಡಿಸಲು ಮುಂದಾಗಿದ್ದರು. ಆಗ ಒತ್ತಾಯದ ಮೇರೆಗೆ ಮದುವೆಗೆ ಒಪ್ಪಿದ್ದ ಆತ ನಂತರ ಪರಾರಿಯಾಗಿದ್ದಾನೆ.

ನ.4ರಂದು ಮತ್ತೊಂದು ಹುಡುಗಿ ಜೊತೆ ಮದುವೆಯಾಗಲು ಗಣೇಶ್ ಸಿದ್ಧತೆ ನಡೆಸಿಕೊಂಡಿದ್ದು, ವಿಷಯ ತಿಳಿದ ಮಮತಾ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪೊಲೀಸರ ಮುಂದೆ ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದ. ಎರಡೇ ದಿನದಲ್ಲಿ ಮದುವೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮದುವೆ ಮಂಟಪಕ್ಕೆ ಬರುವ ಕೊನೆ ಕ್ಷಣದಲ್ಲಿ ನಾಪತ್ತೆಯಾಗಿದ್ದಾನೆ. ಇದೀಗ ಯುವತಿ ನ್ಯಾಯಕ್ಕೆ ಆಗ್ರಹಿಸಿ ಗಣೇಶ್ ಮನೆ ಮುಂದೆ ಧರಣಿ ಕುಳಿತಿದ್ದಾಳೆ.












Click it and Unblock the Notifications