ಕೇಸರಿ ಶಾಲು ವಿದ್ಯಾರ್ಥಿಗಳ ಧಾರ್ಮಿಕ ಭಾವನೆ ಅಲ್ಲ; ಸಿಎಫ್ಐ
ಉಡುಪಿ, ಫೆಬ್ರವರಿ 09; "ಉಡುಪಿಯ ಹಿಜಾಬ್ ವಿವಾದಕ್ಕೆ ಶಾಸಕ ರಘಪತಿ ಭಟ್ ಕಾರಣ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆ ಹೋಗಲು ಕಾರಣ ಶಾಸಕ ರಘಪತಿ ಭಟ್" ಎಂದು ಉಡುಪಿಯಲ್ಲಿ ಸಿಎಫ್ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಪೂಂಜಾಲಕಟ್ಟೆ ಹೇಳಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅತಾವುಲ್ಲಾ ಪೂಂಜಾಲಕಟ್ಟೆ, "ಸಣ್ಣದಾಗಿ ಮುಗಿಸುವ ವಿಷಯವನ್ನು ಶಾಸಕ ರಘಪತಿ ಭಟ್ ಮತ್ತು ಬಿಜೆಪಿ, ಸಂಘಪರಿವಾರ ಮುಂದಿನ ಚುನಾವಣೆಯ ದೃಷ್ಠಿಯಿಂದ ದೊಡ್ಡ ವಿವಾದವಾಗಿ ಮಾಡಿದ್ದಾರೆ. ಹಿಂದೂ-ಮುಸ್ಲಿಂ ವಿಭಜನೆ ಮಾಡುವ ಮೂಲಕ ತಮ್ಮ ಮತ ಬ್ಯಾಂಕ್ ಭದ್ರ ಮಾಡಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು.
"ಹಿಜಾಬ್ ವಿವಾದವನ್ಜು ಸರ್ಕಾರ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾದ ತಲೆಗೆ ಕಟ್ಟುತ್ತಿದ್ದಾರೆ. ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಈ ಎಲ್ಲಾ ಪರಿಸ್ಥಿತಿ ಗೆ ಶಾಸಕ ರಘಪತಿ ಭಟ್ ಕುಮ್ಮುಕ್ಕು ಇದೆ" ಎಂದು ಅತಾವುಲ್ಲಾ ದೂರಿದರು.

"ಇದೊಂದು ಸಣ್ಣ ಮಟ್ಟಿನ ಸಮಸ್ಯೆಯಾಗಿದ್ದು,ಇದನ್ನು ಸಂಘಪರಿವಾರ ಜಟಿಲಗೊಳಿಸಿದೆ. ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ನೀಡಿ ವಿಭಜಿಸಿದೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡಲಾಗಿದೆ. ಸರ್ಕಾರಿ ಕಛೇರಿಯ ರಾಷ್ಟ್ರಧ್ವಜ ಸ್ತಂಭದಲ್ಲಿ ಭಗವಾಧ್ವಜವನ್ನು ಹಾರಿಸಲಾಗಿದೆ. ಮಡಿಕೇರಿಯಲ್ಲಿ ಕೇಸರಿ ಶಾಲು ಧರಿಸಲು ಒಪ್ಪದ ವಿದ್ಯಾರ್ಥಿಗಳ ಮೇಲೆ ಚೂರಿ ಇರಿತ ಮಾಡಲಾಗಿದೆ. ಎಬಿವಿಪಿ ವಿದ್ಯಾರ್ಥಿಗಳಿಗೆಕೇಸರಿ ಪೇಟಗಳನ್ನು ಹಂಚಿ ಗಲಭೆ ನಡೆಸಲು ಹುನ್ನಾರ ಮಾಡಿದೆ" ಎಂದು ಗಂಭೀರ ಆರೋಪ ಮಾಡಿದರು.
"ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಸಂವಿಧಾನ್ಮಕ ಹೋರಾಟ ಮಾಡುತ್ತಿದ್ದಾರೆ. ತಮ್ಮ ಹಕ್ಕಿನ ಪರ ಹೋರಾಟವನ್ನು ಮಾಡುತ್ತಿದ್ದಾರೆ. ಶಾಸಕ ರಘಪತಿ ಭಟ್ ಇದರ ಹಿಂದೆ ಸಿಎಫ್ಐ ಕುಮ್ಮಕ್ಕು ಇದೆ ಎಂಬುವುದಾಗಿ ಆರೋಪಿಸಿದ್ದಾರೆ. ಆದರೆ ಇದರಲ್ಲಿ ಸಿಎಫ್‌ಐ ಪಾತ್ರ ಇಲ್ಲ. ನ್ಯಾಯ ಕೇಳಿ ಬಂದ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಿ ಸಹಾಯ ಮಾಡುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದರು.
ಇನ್ನು ಹಿಬಾನ್ ಕುರಿತು ಹೈಕೋರ್ಟ್ ಆದೇಶದ ಬಗ್ಗೆ ಮಾತನಾಡಿದ ಅತಾವುಲ್ಲಾ ಪೂಂಜಾಲಕಟ್ಟೆ, "ಕೋರ್ಟ್ ಮೇಲೆ ಭರವಸೆ ಇದೆ. ನಮ್ಮ ಸಂವಿಧಾನಾತ್ಮಕ ಹಕ್ಕು ದೊರಕುವ ಬಗ್ಗೆ ಭರವಸೆ ಇದೆ. ಕೋರ್ಟ್ ಆದೇಶ ವಿರುದ್ಧವಾಗಿ ಬಂದರೆ ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ" ಎಂದರು.
"ಹಿಜಾಬ್‌ಗೆ ಕೇಸರಿ ಪರಿಹಾರ ಅಲ್ಲ. ಕೇಸರಿ ಹಿಂದೂಗಳ ಧಾರ್ಮಿಕ ಭಾವನೆಯೂ ಅಲ್ಲ. ಆದರೆ ಸಂಘಪರಿವಾರ ಕೇಸರಿ ಶಾಲು ಧರಿಸಿ ಗಲಭೆ ಎಬ್ಬಿಸುತ್ತಿದೆ. ಸಿಎಫ್‌ಐ ವಿದ್ಯಾರ್ಥಿನಿಯರಿಗೆ ಯಾವುದೇ ತರಬೇತಿ ನೀಡಿಲ್ಲ. ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಬೇಡಿಕೆ ಇಟ್ಟಾಗ ಪೂರ್ವಭಾವಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಕಾಲೇಜಿನ ಶಿಕ್ಷಕರು ನೀಡಿದ್ದಾರೆ. ಆ ಬಳಿಕ ಕಾಲೇಜಿನಿಂದ ಹೊರ ಹಾಕಿದ್ದಾರೆ. ವಿದ್ಯಾರ್ಥಿನಿಯರಿಗೆ ತಮ್ಮ ಧಾರ್ಮಿಕ ಹಕ್ಕು ಸಿಗದೇ ಇದ್ದಾಗ ಸಿಎಫ್‌ಐ ಬಳಿಗೆ ಬಂದಿದ್ದಾರೆ. ನಾವೇ ವಿದ್ಯಾರ್ಥಿನಿಯರ ಬಳಿ ಹೋಗಿಲ್ಲ" ಎಂದರು.
"ಸಂಘ ಪರಿವಾರ ಮತ್ತೆ ವಿದ್ಯಾರ್ಥಿಗಳನ್ನು ಕೇಸರಿ ಶಾಲು ಧರಿಸಿ ಗಲಭೆಗೆ ಹುನ್ನಾರ ಮಾಡಿದರೆ ಸಿಎಫ್‌ಐ ಕೂಡಾ ಇದಕ್ಕೆ ಪ್ರತಿ ಉತ್ತರ ನೀಡುತ್ತದೆ. ರಾಜ್ಯಮಟ್ಟದಲ್ಲಿ ದೊಡ್ಡ ಹೋರಾಟ ನಡೆಸುತ್ತೇವೆ" ಎಂದು ಸಿಎಫ್ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಪೂಂಜಾಲಕಟ್ಟೆ ಎಚ್ಚರಿಸಿದರು.











Click it and Unblock the Notifications