Different Frog: ಕುಂದಾಪುರದಲ್ಲಿ ಆಕರ್ಷಕ ಬಣ್ಣದ ಕಪ್ಪೆ ಪತ್ತೆ
ಉಡುಪಿ, ಜುಲೈ 23: ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆಯೊಂದು ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಕಂಡುಬಂದಿದೆ. ಬಸ್ರೂರಿನಲ್ಲಿ ಸಂದೇಶ್ ಪುತ್ರನ್ ಎಂಬವರ ಮನೆಯಲ್ಲಿ ಈ ವಿಶಿಷ್ಟ ಕಪ್ಪೆ ಕಾಣಿಸಿಕೊಂಡಿದೆ.
ಇದರ ಸಾಮಾನ್ಯ ಹೆಸರು ಇಂಡಿಯನ್ ಪೈಂಟೆಡ್ ಫ್ರಾಗ್(ವೈಜ್ಞಾನಿಕ ಹೆಸರು- ಉಪರೋಡಾನ್ ಟ್ಯಾಪ್ರೊಬಾನಿಕಸ್). ಸಾಮಾನ್ಯವಾಗಿ ಎಲ್ಲ ಕಡೆ ಕಂಡು ಬರುವ ಈ ಕಪ್ಪೆಯನ್ನು ಶ್ರೀಲಂಕಾ ಬುಲ್‌ಫ್ರಾಗ್ ಎಂಬುದಾಗಿಯೂ ಕರೆಯಲಾಗುತ್ತದೆ.

ಮರದೊಳಗೆ ಇರುವ ಈ ಕಪ್ಪೆ ನಿಂತ ನೀರಲ್ಲಿ ಅಂದರೆ ಕೆರೆ, ಹಳ್ಳಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಕುಂದಾಪುರದಲ್ಲಿ ಕಂಡುಬಂದಿರುವ ಈ ಕಪ್ಪೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಉಡುಪಿ ನಗರಸಭೆ ಎದುರೇ ಬೃಹತ್ ಹೊಂಡ: ಮುಚ್ಚುವಂತೆ ಸ್ಥಳೀಯರ ಪ್ರತಿಭಟನೆ
ಉಡುಪಿ: ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಆಸ್ಪತ್ರೆಯ ಬೃಹತ್ ತಳಪಾಯ ಹೊಂಡದಲ್ಲಿ ನೀರು ತುಂಬಿದ್ದು ಈ ಹೊಂಡ ಮುಚ್ಚುವಂತೆ ಆಗ್ರಹಿಸಿ ಇಂದು ವಿಶಿಷ್ಟ ಮತ್ತು ಅಪಾಯಕಾರಿ ಪ್ರತಿಭಟನೆ ನಡೆಯಿತು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಕ್ರೈನ್ ಮೂಲಕ ಬೃಹತ್ ಹೊಂಡಕ್ಕೆ ತೆರಳಿ ನೀರಿನಲ್ಲಿ ನಗರಸಭೆಗೆ ಎಚ್ಚರಿಕೆ ಸಂದೇಶವುಳ್ಳ ಜಾಗೃತಿ ಫಲಕವನ್ನು ತೇಲಿಬಿಟ್ಟರು.
ಈ ಆಸ್ಪತ್ರೆ ತಳಪಾಯದ ಹೊಂಡವನ್ನು ಏಳೆಂಟು ವರ್ಷಗಳ ಹಿಂದೆ ಅಗೆಯಲಾಗಿದ್ದು ಪ್ರತಿ ಮಳೆಗಾಲಕ್ಕೆ ಇದರಲ್ಲಿ ನೀರು ತುಂಬುತ್ತಿದೆ. ನಗರಕ್ಕೆ ಇದು ಅಪಾಯದ ಜೊತೆಗೆ ಸಾಂಕ್ರಾಮಿಕ ರೋಗಗಳ ತಾಣವೂ ಆಗಿದೆ. ಈ ಹಿನ್ನೆಲೆಯಲ್ಲಿ ಈ ಹೊಂಡವನ್ನು ಮುಚ್ಚಬೇಕು ಎಂದು ಆಗ್ರಹಿಸಿ ಕ್ರೇನ್ ಮೂಲಕ ನೀರಿಗೆ ಇಳಿದು ಎಚ್ಚರಿಕೆ ಫಲಕವನ್ನು ನೀರಲ್ಲಿ ತೇಲಿ ಬಿಡಲಾಯಿತು.
ಬಳಿಕ ಮಾತನಾಡಿದ ಪ್ರತಿಭಟನಕಾರ ನಿತ್ಯಾನಂದ, 10 ದಿನಗಳ ಒಳಗೆ ಈ ಬೃಹತ್ ಹೊಂಡವನ್ನು ಮುಚ್ಚಿಸಬೇಕು. ಇದೊಂದು ನಗರದ ಸಾಂಕ್ರಾಮಿಕ ರೋಗಗಳ ತಾಣ. ತ್ಯಾಜ್ಯಗಳ ಜೊತೆಗೆ ಈ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಡೆಂಗ್ಯೂ ,ಮಲೇರಿಯಾ ಸಹಿತ ಮಾರಕ ರೋಗಗಳು ಇಲ್ಲಿಂದಲೇ ಹರಡುತ್ತವೆ. ನಗರಸಭೆ ಎದುರೇ ಇರುವ ಈ ಬೃಹತ್ ಹೊಂಡವನ್ನು ಮುಚ್ಚಬೇಕು ಎಂದು ಆಗ್ರಹಿಸಿದರು. ಇವರಿಗೆ ಸಾಮಾಜಿಕ ಹೋರಾಟಗಾರ ವೈದ್ಯ ಡಾ. ಪಿವಿ ಭಂಡಾರಿ ಕೂಡ ಸಾಥ್ ನೀಡಿದರು.












Click it and Unblock the Notifications