Viral Video: ಮಣಿಪಾಲ ಕಾಲೇಜಿನಲ್ಲಿ 6ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ, ವಿಡಿಯೋ ಸೆರೆ
ಉಡುಪಿ, ಫೆಬ್ರವರಿ 20: ಪರೀಕ್ಷೆ ವೇಳೆ ಮೊಬೈಲ್ ಬಳಸುತ್ತಿದ್ದ ಆರೋಪ ಹೊತ್ತ ವಿದ್ಯಾರ್ಥಿ ಕಾಲೇಜಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದ್ದು, ಇದೀಗ ವಿದ್ಯಾರ್ಥಿ ಆರನೇ ಮಹಡಿ ಕಟ್ಟಡದಿಂದ ಜಿಗಿಯುವ ವಿಡಿಯೋ ವೈರಲ್ ಆಗಿದೆ.
ಪರೀಕ್ಷಾ ಭೀತಿ ಹಾಗೂ ನಕಲು ಮಾಡಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಮಣಿಪಾಲದ ವಿವಿಯ ಅಲೈಡ್ ಹೆಲ್ತ್ ವಿಭಾಗದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಕಳೆದ ಶನಿವಾರ (ಫೆಬ್ರವರಿ 16)ರಂದು ಕಾಲೇಜಿನ 6ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿದ್ದ. ಬಿಹಾರ ಮೂಲದ ಸತ್ಯಂ ಸುಮನ್(19) ಮೃತ ವಿದ್ಯಾರ್ಥಿ ಎಂದು ಎಂದು ಗುರುತಿಸಲಾಗಿತ್ತು.

ಘಟನೆಯ ಹಿನ್ನೆಲೆ ಏನು..?
ಮಣಿಪಾಲದ ವಿವಿಯ ಅಲೈಡ್ ಹೆಲ್ತ್ ವಿಭಾಗದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಗಳಗೆ ಫೆಬ್ರವರಿ 16 ರಂದು ಪರೀಕ್ಷೆ ಆಯೋಜನೆ ಮಾಡಲಾಗಿತ್ತು. ಮೃತ ಸತ್ಯಂ ಸುಮನ್ ಕೂಡ ಎಂಸಿಎಚ್‌ಪಿ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು, ಪರೀಕ್ಷೆಯಲ್ಲಿ ನಕಲು ಮಾಡಲು ಮುಂದಾಗಿದ್ದಾನೆ. ಮೊಬೈಲ್ ಮೂಲಕ ಕಾಪಿ ಮಾಡುವ ವೇಳೆ ಸತ್ಯಂ ಸುಮನ್ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಯಿಂದ ಆತನನ್ನು ಪರೀಕ್ಷಾ ಉಸ್ತುವಾರಿ ಹೊರದಬ್ಬಿದ್ದಾರೆ. ಇದರಿಂದ ಮನನೊಂದು ಆತ ಪರೀಕ್ಷೆ ನಡೆಯುತ್ತಿದ್ದ ವೇಳೆಯಲ್ಲಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿತ್ತು.
ಸತ್ಯಂ ಸುಮನ್ ಕಟ್ಟಡದಿಂದ ಜಿಗಿಯುತ್ತಿದ್ದಂತೆ ಇತರ ವಿದ್ಯಾರ್ಥಿಗಳು ಭಯಗೊಂಡಿದ್ದು, ವಿದ್ಯಾರ್ಥಿಗಳು ಆತಂಕದಿಂದ ಅತ್ತಿತ್ತ ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಹಿಂದೆ ಲಭ್ಯವಾಗಿತ್ತು. ಇದೀಗ ಸತ್ಯಂ ಸುಮನ್ ಕಟ್ಟಡದ ಮೇಲೇರಿ ಜಿಗಿಯುವ ದೃಶ್ಯ ಕೂಡ ಲಭ್ಯವಾಗಿದೆ. ಕಾಲೇಜು ಸಮವಸ್ತ್ರದಲ್ಲೇ ಸತ್ಯಂ ಸುಮನ್ ಕಾಲೇಜಿನ ಕಟ್ಟದ ಅಂತಿಮ ಮಹಡಿ ಏರಿದ್ದು, ಕೆಳಗೆ ಸ್ನೇಹಿತರು ಕಿರುಚುತ್ತಿದ್ದರೂ, ನೋಡ ನೋಡುತ್ತಿದ್ದಂತೆ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ. ಈ ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರ ತನಿಖೆ ಮುಂದುವರಿದಿದೆ.












Click it and Unblock the Notifications