Tumkur: ತುಮಕೂರು ಕ್ಷೇತ್ರದಲ್ಲಿ ಗೆಲುವು ಸಾಧಿಸ್ತಾರಾ ಕಾಂಗ್ರೆಸ್‌ನ ಎಸ್‌ಪಿ ಮುದ್ದಹನುಮೇಗೌಡ
ಮುಂಬರುವ ಲೋಕಸಭಾ ಚುನಾವಣೆಗಾಗಿ 39 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಮೂಲಕ ಕಾಂಗ್ರೆಸ್ ಅಧಿಕೃತವಾಗಿ ಸಿದ್ಧತೆ ಆರಂಭಿಸಿದೆ. ಕರ್ನಾಟಕದಲ್ಲಿ 7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ. ಸುರೇಶ್ ಸ್ಪರ್ಧೆ ಮಾಡಲಿದ್ದಾರೆ. ಶಿವಮೊಗ್ಗದಿಂದ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಂಸದ ಎಸ್‌ಪಿ ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನದೇ ತಪ್ಪಿನಿಂದ ತುಮಕೂರು ಕ್ಷೇತ್ರವನ್ನು ಕಳೆದುಕೊಂಡಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎಸ್‌ಪಿ ಮುದ್ದಹನುಮೇಗೌಡ ತಮ್ಮ ಕೆಲಸದಿಂದ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. 2019ರ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲುವ ಕನಸು ಕಂಡಿದ್ದ ಅವರಿಗೆ ಸ್ವತಃ ಕಾಂಗ್ರೆಸ್ ಪಕ್ಷವೇ ಆಘಾತ ನೀಡಿತ್ತು.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಅಭ್ಯರ್ಥಿಗೆ ಬಿಟ್ಟುಕೊಟ್ಟಿತ್ತು. ಜೆಡಿಎಸ್‌ನಿಂದ ವರಿಷ್ಠರಾದ ಹೆಚ್‌ಡಿ ದೇವೇಗೌಡ ಅವರು, ಕಾಂಗ್ರೆಸ್-ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ, ಬಿಜೆಪಿ ವಿರುದ್ಧ ಸೋತರು.
ಬಿಜೆಪಿ ಅಭ್ಯರ್ಥಿ ಜಿ. ಎಸ್ ಬಸವರಾಜು 5,96,124 ಮತ ಪಡೆಯುವ ಮೂಲಕ ಜಯಶಾಲಿಯಾದರೆ, ಹೆಚ್‌ಡಿ ದೇವೇಗೌಡ 5,82,788 ಮತ ಪಡೆದು ಕಡಿಮೆ ಅಂತರದಲ್ಲಿ ಸೋತಿದ್ದರು. ಒಂದು ವೇಳೆ ಇಲ್ಲಿ ಹೆಚ್‌ಡಿ ದೇವೇಗೌಡ ಅವರ ಬದಲಾಗಿ ಎಸ್‌ಪಿ ಮುದ್ದಹನುಮೇಗೌಡ ಸ್ಪರ್ಧೆ ಮಾಡಿದ್ದರೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿತ್ತು.
ಬಿಜೆಪಿ ಸೇರಿದ್ದ ಎಸ್‌ಪಿಎಂ
ತಮ್ಮ ಪಕ್ಷದಿಂದಲೇ ಕಡೆಗಣಿಸಿದ ನಂತರ ಬೇಸರಗೊಂಡ ಎಸ್‌ಪಿ ಮುದ್ದಹನುಮೇಗೌಡ ಬಿಜೆಪಿ ಸೇರಿದ್ದರು. ಆದರೂ ಅವರಿಗೆ ಅಲ್ಲಿ ಸೂಕ್ತ ಸ್ಥಾನ ಮಾನ ಸಿಗಲಿಲ್ಲ. 2024ರ ಲೋಕಸಭಾ ಚುನಾವಣೆಗೆ ಮುನ್ನ ಅವರನ್ನು ವಾಪಸ್ ಕಾಂಗ್ರೆಸ್‌ಗೆ ಕರೆತರುವಲ್ಲಿ ಪಕ್ಷದ ಮುಖಂಡರು ಯಶಸ್ವಿಯಾಗಿದ್ದಾರೆ.
ಪಕ್ಷದ ಟಿಕೆಟ್ ಕೊಡುವ ಭರವಸೆ ಮೇರೆಗೆ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಈಗ ಅವರಿಗೆ ಟಿಕೆಟ್ ಕೂಡ ಸಿಕ್ಕಿದೆ. ಇನ್ನೇನಿದ್ದರೂ ತಮ್ಮ ಗೆಲುವಿಗಾಗಿ ಅವರು ಕೆಲಸ ಮಾಡಬೇಕಿದೆ. ಅವರಿಗೆ ಈ ಬಾರಿ ಕಾಂಗ್ರೆಸ್ ಗ್ಯಾರಂಟಿಗಳ ಬಲವೂ ಇದೆ. ಅದನ್ನು ಮತವಾಗಿ ಹೇಗೆ ಮಾರ್ಪಡಿಸಿಕೊಳ್ಳುತ್ತಾರೆ ಎನ್ನುವುದು ಕುತೂಹಲವಾಗಿದೆ.
ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ. ಇಬ್ಬರು ಜೆಡಿಎಸ್, ಇಬ್ಬರು ಬಿಜೆಪಿ ಶಾಸಕರಿದ್ದಾರೆ. ಈ ಬಾರಿ ಎಸ್‌ಪಿ ಮುದ್ದಹನುಮೇಗೌಡರ ಗೆಲುವು ಸುಲಭವಾಗಿ ಸಿಕ್ಕುವುದು ಅನುಮಾನವಾಗಿದ್ದರೂ, ತಾವು ಸಂಸದರಾಗಿದ್ದಾಗ ಮಾಡಿದ ಕೆಲಸಗಳು ಕೈ ಹಿಡಿಯುವ ವಿಶ್ವಾಸದಲ್ಲಿದ್ದಾರೆ.












Click it and Unblock the Notifications