Vande Bharat Express: ತುಮಕೂರಿನಲ್ಲಿ ವಂದೇ ಭಾರತ್ ನಿಲುಗಡೆ, ವೇಳಾಪಟ್ಟಿ
ತುಮಕೂರು, ಆಗಸ್ಟ್ 22: ತುಮಕೂರು ಜನರ ಬಹುದಿನದ ಬೇಡಿಕೆ ಈಡೇರಿದೆ. ವಂದೇ ಭಾರತ್ ರೈಲಿಗೆ ಶುಕ್ರವಾರದಿಂದ ನಗರದಲ್ಲಿ ನಿಲುಗಡೆ ನೀಡಲಾಗುತ್ತಿದೆ. ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಈ ಸೇವೆಗೆ ಚಾಲನೆ ನೀಡಲಿದ್ದಾರೆ. ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲು ತುಮಕೂರಿನಲ್ಲಿ ನಿಲ್ಲಲಿದೆ.
ಸಚಿವ ವಿ. ಸೋಮಣ್ಣ ಈ ಕುರಿತು ಫೇಸ್‌ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಶುಕ್ರವಾರ ಸಂಜೆ 5.30ಕ್ಕೆ ತುಮಕೂರು ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಚಾಲನಾ ಕಾರ್ಯಕ್ರಮವಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ, ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

ಕೇಂದ್ರ ರೈಲ್ವೆ ಸಚಿವಾಲಯ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿಗೆ ತುಮಕೂರಿನಲ್ಲಿ ಹೆಚ್ಚುವರಿ ನಿಲುಗಡೆ ನೀಡಲು ಒಪ್ಪಿಗೆ ನೀಡಿದೆ. ಇಷ್ಟು ದಿನ ರೈಲು ದಾವಣಗೆರೆ, ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಿಲುಗಡೆ ಹೊಂದಿತ್ತು.
ರೈಲು ವೇಳಾಪಟ್ಟಿ: ವಂದೇ ಭಾರತ್ ರೈಲು ಆಗಸ್ಟ್ 23ರ ಸಂಜೆ 6.18ಕ್ಕೆ ತುಮಕೂರಿನಲ್ಲಿ ಮೊದಲ ಸ್ಟಾಪ್ ನೀಡಲಿದೆ. ಆಗಸ್ಟ್ 24ರಿಂದ ಧಾರವಾಡಕ್ಕೆ ತೆರಳುವಾಗ ಮತ್ತು ಧಾರವಾಡದಿಂದ ಬೆಂಗಳೂರಿಗೆ ವಾಪಸ್ ಆಗುವಾಗ ಬೆಳಗ್ಗೆ ಮತ್ತು ಸಂಜೆ ತುಮಕೂರಿನಲ್ಲಿ ನಿಲುಗಡೆಗೊಳ್ಳಲಿದೆ.
ರೈಲು ಸಂಖ್ಯೆ 20662 ಧಾರವಾಡ-ಕೆಎಸ್ಆರ್ ಬೆಂಗಳೂರು ರೈಲು ತುಮಕೂರು ರೈಲು ನಿಲ್ದಾಣಕ್ಕೆ ಸಂಜೆ 6.18/ 6.20ಕ್ಕೆ ಆಗಮಿಸಿ/ ನಿರ್ಗಮಿಸಲಿದೆ. ಉಳಿದಂತೆ ನಿಲ್ದಾಣಗಳ ನಿಲುಗಡೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ರೈಲು ಸಂಖ್ಯೆ 20661 ಕೆಎಸ್‌ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣಕ್ಕೆ ಬೆಳಗ್ಗೆ 6.32/ 6.34 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ. ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.
ಸದ್ಯ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ಸಂಚಾರ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ರೈಲ್ವೆ ಇಲಾಖೆ ಇದಕ್ಕೆ ಒಪ್ಪಿಗೆಯೂ ನೀಡಿದೆ. 2023ರ ನವೆಂಬರ್‌ನಲ್ಲಿ ಬೆಂಗಳೂರು-ಬೆಳಗಾವಿ ನಡುವೆ ಪ್ರಾಯೋಗಿಕ ಸಂಚಾರವೂ ಪೂರ್ಣಗೊಂಡಿದೆ. ಆದರೆ ಬೆಳಗಾವಿ ತನಕ ರೈಲು ವಿಸ್ತರಣೆ ಇನ್ನೂ ಸಹ ಆರಂಭವಾಗಿಲ್ಲ.
ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವಿನ ರೈಲು ಕರ್ನಾಟಕದ 2ನೇ ವಂದೇ ಭಾರತ್ ರೈಲು. ಈ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಗೂ ಈ ಕುರಿತು ಬೇಡಿಕೆ ಇಡಲಾಗಿದೆ. ಆದರೆ ಇಲ್ಲಿಯ ತನಕ ಬೇಡಿಕೆ ಈಡೇರಿಲ್ಲ.
ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ರೈಲು ಇದಾಗಿದೆ. ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ರೈಲು ಅನುಕೂಲವಾಗಿದೆ. ಈ ರೈಲಿಗೆ ಈಗ ತುಮಕೂರಿನಲ್ಲಿ ಮತ್ತೊಂದು ನಿಲುಗಡೆ ಸಿಕ್ಕಿದ್ದು, ತುಮಕೂರು ಜಿಲ್ಲೆಯ ಜನರಿಗೆ ಸಹ ಸಹಾಯಕವಾಗಿದೆ.












Click it and Unblock the Notifications