Tumakuru Siddaganga Mutt: ವಿದ್ಯುತ್ ಬಿಲ್ ಸಮಸ್ಯೆ ಅಂತ್ಯ: ತುಮಕೂರು ಸಿದ್ಧಗಂಗಾ ಮಠದ ನೀರಿನ ಆತಂಕ ದೂರ
ತುಮಕೂರು, ಜನವರಿ 29: ಪಂಪ್ ಹೌಸ್‌ನ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಸುವ ವ್ಯವಸ್ಥೆಯನ್ನು ಕೆಐಎಡಿಬಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಸಿದ್ಧಗಂಗಾ ಮಠಕ್ಕೆ ನೀರಿನ ಕೊರತೆ ಎದುರಾಗುವ ಆತಂಕ ಉಂಟಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಈ ಸಮಸ್ಯೆಯನ್ನು ನಿವಾರಣೆ ಮಾಡಲಾಗಿದೆ.
ಈ ಬೆಳವಣಿಗೆಯ ಕುರಿತಂತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ, ಎಚ್ಚೆತ್ತ ಕೆಐಎಡಿಬಿ ಸುಮಾರು 1.96 ಕೋಟಿ ರೂಪಾಯಿ ಬಾಕಿ ಹಣವನ್ನು ಬೆಸ್ಕಾಂಗೆ ಪಾವತಿ ಮಾಡಿದೆ. ಇದರಿಂದ ಮಠಕ್ಕೆ ಎದುರಾಗಿದ್ದ ನೀರಿನ ಸಮಸ್ಯೆ ಸದ್ಯಕ್ಕೆ ನಿವಾರಣೆ ಆದಂತಾಗಿದೆ. ಸಾಮಾನ್ಯವಾಗಿ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರನ್ನು ಪಂಪ್ ಮಾಡಲಾಗುತ್ತಿದ್ದು, ಅಲ್ಲಿಂದ ಸಿದ್ಧಗಂಗಾ ಮಠಕ್ಕೆ ನೀರು ಪೂರೈಕೆ ಆಗುತ್ತದೆ.

ವಿದ್ಯುತ್ ಸಂಪರ್ಕ ಕಡಿತ: ಆದರೆ, ಕಳೆದ ವರ್ಷ ವಿದ್ಯುತ್ ವೆಚ್ಚ ಭರಿಸುವ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಮಠವು ನೀರನ್ನು ಬಳಸದೇ ಇದ್ದರೂ ವಿದ್ಯುತ್ ಬಿಲ್ ಪಾವತಿಸುವಂತೆ ನೋಟಿಸ್ ನೀಡಲಾಗಿತ್ತು. ಈ ವಿಷಯ ಗಮನಕ್ಕೆ ಬಂದ ನಂತರ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ವೆಚ್ಚವನ್ನು ಸರ್ಕಾರವೇ ಭರಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ದೀರ್ಘಕಾಲ ಬಿಲ್ ಪಾವತಿ ಆಗದ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ನೀರಿನ ಪೂರೈಕೆ ಆರಂಭ: ಪ್ರತಿದಿನ ಸಾವಿರಾರು ಭಕ್ತರು ಹಾಗೂ ಸುಮಾರು ಸಾವಿರಾರು ವಿದ್ಯಾರ್ಥಿಗಳು ಮಠದ ಮೇಲೆ ಅವಲಂಬಿತರಾಗಿರುವುದರಿಂದ ನೀರಿನ ಕೊರತೆ ದೊಡ್ಡ ಸಮಸ್ಯೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿತ್ತು. ದೇವರಾಯಪಟ್ಟಣ ಕೆರೆಗೆ ಹಲವು ತಿಂಗಳಿನಿಂದ ನೀರು ಹರಿಯದ ಹಿನ್ನೆಲೆ ಸ್ಥಳೀಯ ರೈತರಲ್ಲಿಯೂ ಚಿಂತೆ ಹೆಚ್ಚಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಬಾಕಿ ಹಣ ಪಾವತಿಯಾದ ಹಿನ್ನೆಲೆ ಸಿದ್ಧಗಂಗಾ ಮಠಕ್ಕೆ ನೀರಿನ ಪೂರೈಕೆ ಪುನರ್‌ಸ್ಥಾಪನೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತುಮಕೂರಿನ ಶ್ರೀ ಸಿದ್ಧಗಂಗಾ ಮಠ ತನ್ನ ಪ್ರಸಿದ್ದ "ಅನ್ನದಾಸೋಹ" ಸೇವೆಯ ಮೂಲಕ ಪ್ರತೀ ದಿನ ಸಾವಿರಾರು ಜನರಿಗೆ ಉಚಿತವಾಗಿ ಊಟವನ್ನು ನೀಡುತ್ತದೆ. ಮಾಹಿತಿ ಪ್ರಕಾರ, ಈ ಮಠದಲ್ಲಿ ಪ್ರತಿ ದಿನ ಸರಾಸರಿ ಸುತ್ತಮುತ್ತ 14,000 ಜನರಿಗೆ ಊಟ ಹಂಚಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳು, ಭಕ್ತರು ಮತ್ತು ಕಾರ್ಯಕರ್ತರು ಸೇರಿದ್ದಾರೆ. ಸಾಮಾನ್ಯ ದಿನದ ಕೇಂದ್ರ ಅಂದು ಬಹುಮಾನಿತ ಗಣನೆ ಪ್ರಕಾರ ಸುಮಾರು 11,000 ವಿದ್ಯಾರ್ಥಿಗಳಿಗೆ ಊಟ ಹಾಕಲಾಗುತ್ತದೆ. ಹಾಗೂ ವಿಶೇಷ ಹಬ್ಬಗಳ ಸಂದರ್ಭಗಳಲ್ಲಿ ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ. ಅವರಿಗೆಲ್ಲ ಊಟ ಹಾಕಲಾಗುತ್ತದೆ ಎನ್ನುವ ಮಾಹಿತಿಯಿದೆ.












Click it and Unblock the Notifications