ತುಮಕೂರು : ಸೋಲಾರ್ ಪಾರ್ಕ್ ಬಗ್ಗೆ ರೈತರೊಂದಿಗೆ ಮಾತುಕತೆ
ತುಮಕೂರು, ಸೆಪ್ಟೆಂಬರ್ 29 : ಪಾವಗಡ ತಾಲೂಕಿನ ತಿರುಮಣಿ ಗ್ರಾಮದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಸಂಬಂಧ ಸ್ಥಳೀಯರೊಂದಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದರು. 11 ಸಾವಿರ ಎಕರೆ ಪ್ರದೇಶದಲ್ಲಿ 2000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಬೃಹತ್ ಸೋಲಾರ್ ಪಾರ್ಕ್ ನಿರ್ಮಾಣಗೊಳ್ಳಲಿದೆ.
ಸೋಮವಾರ ತಿರುಮಣಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವರು, ಸ್ಥಳೀಯ ರೈತರು ಮತ್ತು ಜನಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದರು. 'ರಾಜ್ಯದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ಈ ಸೋಲಾರ್ ಪಾರ್ಕ್ ಪ್ರಮುಖವಾದ ಪಾತ್ರವನ್ನು ವಹಿಸಲಿದೆ' ಎಂದು ಹೇಳಿದರು. [ಪಾವಗಡಕ್ಕೆ ಬಂತು ಸೋಲಾರ್ ಪಾರ್ಕ್]

'ಕರ್ನಾಟಕ ಸೋಲಾರ್ ಪವರ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ವತಿಯಿಂದ ಪಾರ್ಕ್ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಯೋಜನೆಗೆ ಒಪ್ಪಿಗೆ ನೀಡಿದ್ದು, 11 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುವ ಪಾರ್ಕ್ 2000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಿದೆ' ಎಂದರು. [ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೌರಶಕ್ತಿ ಮೇಲ್ಛಾವಣಿ ಬಲ]
'ಸೋಲಾರ್ ಪಾರ್ಕ್ ಸ್ಥಾಪನೆಗೆ ಜಮೀನು ಗುತ್ತಿಗೆ ನೀಡುವ ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ 21,000 ರೂ. ಗುತ್ತಿಗೆ ದರ ನೀಡಲಾಗುತ್ತದೆ. ಎರಡು ವರ್ಷಕ್ಕೊಮ್ಮೆ ಗುತ್ತಿಗೆ ದರವನ್ನು ಶೇ 5ರಷ್ಟು ಏರಿಕೆ ಮಾಡಲಾಗುತ್ತದೆ. ರೈತರು 30 ವರ್ಷಗಳ ಅವಧಿಗೆ ಜಮೀನನ್ನು ಗುತ್ತಿಗೆ ನೀಡಬೇಕಾಗುತ್ತದೆ. ನೋಂದಣಿ ವೆಚ್ಚವನ್ನು ಸರ್ಕಾರವೇ ಭರಿಸಲಿದೆ' ಎಂದು ಸಚಿವರು ರೈತರಿಗೆ ಮಾಹಿತಿ ನೀಡಿದರು. [ಕರ್ನಾಟಕದಲ್ಲಿ ಹರ್ಭಜನ್ 'ಸೌರಘಟಕ' ಸ್ಥಾಪನೆ]

ಕೇಂದ್ರ ಸರ್ಕಾರದ ನೆರವಿನೊಂದಿಗೆ ದೇಶದಾದ್ಯಂತ 25 ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಗಾಗಿ ಕರ್ನಾಟಕದಲ್ಲಿ ಅತಿಹೆಚ್ಚು ಉಷ್ಣಾಂಶವಿರುವ ಪಾವಗಡ ತಾಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಏಷ್ಯಾದಲ್ಲಿಯೇ ಇದು ದೊಡ್ಡ ಸೌರ ಪಾರ್ಕ್ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
ಮಧ್ಯಪ್ರದೇಶದಲ್ಲಿ 750 ಮೆಗಾವಾಟ್, ಆಂಧ್ರಪ್ರದೇಶದಲ್ಲಿ 1 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಸೋಲಾರ್ ಪಾರ್ಕ್‌ಗಳಿವೆ. ಇವುಗಳನ್ನು ಹೊರತುಪಡಿಸಿದರೆ ಪಾವಗಡದ 2 ಸಾವಿರ ಮೆಗಾವಾಟ್ ಸಾಮರ್ಥ್ಯದ ಪಾರ್ಕ್ ಏಷ್ಯಾದಲ್ಲೇ ದೊಡ್ಡ ಪಾರ್ಕ್ ಆಗಲಿದೆ.












Click it and Unblock the Notifications