ಒಂದು ನೋಟು, ಒಂದು ವೋಟು ಜೋಳಿಗೆ ಹಿಡಿದು ಮಾಜಿ ಸಚಿವ ಪ್ರಚಾರ!
ಒಂದು ನೋಟು, ಒಂದು ವೋಟು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಚುನಾವಣಾ ಪ್ರಚಾರಕ್ಕೆ ತುಮಕೂರು ನಗರದಲ್ಲಿ ಚಾಲನೆ ನೀಡಿದ್ದಾರೆ.
ತುಮಕೂರು, ಮಾರ್ಚ್ 14; ಈ ಬಾರಿಯ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವರು ಒಂದು ನೋಟು, ಒಂದು ವೋಟು ಎಂದು ಜೋಳಿಗೆ ಹಿಡಿದು ಪ್ರಚಾರ ಆರಂಭಿಸಿದ್ದಾರೆ. ಆದರೆ ಹಾಲಿ ಬಿಜೆಪಿ ಶಾಸಕರು ಇರುವ ಕ್ಷೇತ್ರದಲ್ಲಿಯೇ ಅವರು ಟಿಕೆಟ್ ಬಯಸಿದ್ದು, ಮುಂದಿನ ದಿನಗಳಲ್ಲಿ ಟಿಕೆಟ್ ಯಾರಿಗೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಈ ವರದಿ ತುಮಕೂರು ನಗರ ಕ್ಷೇತ್ರದ್ದು. ಸದ್ಯ ಕ್ಷೇತ್ರ ಬಿಜೆಪಿ ವಶದಲ್ಲಿದ್ದು ಹಾಲಿ ಶಾಸಕ ಜಿ. ಬಿ. ಜ್ಯೋತಿಗಣೇಶ್. ಆದರೆ ಇದೇ ಕ್ಷೇತ್ರದಿಂದ ಈ ಬಾರಿಯ ಚುನಾವಣೆಗೆ ಬಿಜೆಪಿ ಟಿಕೆಟ್ ಬಯಸಿದ್ದಾರೆ ಮಾಜಿ ಸಚಿವ ಸೊಗಡು ಶಿವಣ್ಣ. ಇದೇ ನನ್ನ ಕೊನೆಯ ಚುನಾವಣೆ ಎಂದು ಅನುಕಂಪವನ್ನು ತೇಲಿಬಿಟ್ಟಿದ್ದಾರೆ. ಬಿಜೆಪಿ ಟಿಕೆಟ್ ಹಂಚಿಕೆ ಮಾಡುವಾಗ ತುಮಕೂರು ನಗರ ಕಗ್ಗಂಟಾಗುವ ನಿರೀಕ್ಷೆ ಇದೆ.

ಸೊಗಡು ಶಿವಣ್ಣ ಚುನಾವಣಾ ಪ್ರಚಾರಕ್ಕೆ ತುಮಕೂರು ನಗರದಲ್ಲಿ ಚಾಲನೆ ನೀಡಿದ್ದಾರೆ. ಎನ್. ಆರ್. ಕಾಲೋನಿಯಲ್ಲಿರುವ ಶ್ರೀ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಶ್ರೀ ಗುರು ಆದಿ ಕಾಯಕಯೋಗಿ ಶ್ರೀಗಳ ಆಶೀರ್ವಾದದೊಂದಿಗೆ 'ಒಂದು ಜೋಳಿಗೆ ನೋಟು, ಒಂದು ಜೋಳಿಗೆ ವೋಟು' ಎಂದು ತಮಟೆ ಬಾರಿಸುವುದರ ಮುಖಾಂತರ ಪ್ರಚಾರ ಆರಂಭಿಸಿದ್ದಾರೆ. "ಪಕ್ಷದ ವರಿಷ್ಠರು ನನಗೆ ಟಿಕೆಟ್ ಖಚಿತ ಪಡಿಸಿದ್ದಾರೆ" ಎಂಬ ಸೊಗಡು ಶಿವಣ್ಣ ಹೇಳಿಕೆ ಕುತೂಹಲಕ್ಕೂ ಕಾರಣವಾಗಿದೆ.
ಎಲ್ಲಾ ಹಾಲಿ ಬಿಜೆಪಿ ಶಾಸಕರಿಗೂ ಟಿಕೆಟ್ ಸಿಗುವುದಿಲ್ಲ ಎಂಬ ಹೇಳಿಕೆಯೇ ಸೊಗಡು ಶಿವಣ್ಣಗೆ ವರದಾನವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಜಿ. ಬಿ. ಜ್ಯೋತಿಗಣೇಶ್ ಬದಲು ತನಗೆ ಟಿಕೆಟ್ ನೀಡುತ್ತಾರೆ ಎಂದು ಅವರು ಬಲವಾಗಿ ನಂಬಿದ್ದಾರೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಸೊಗಡು ಶಿವಣ್ಣ ಮನೆಗೆ ಭೇಟಿ ನೀಡಿದ್ದರು. ಆದ್ದರಿಂದ ಈ ಬಾರಿ ಮಾಜಿ ಸಚಿವರಿಗೆ ಟಿಕೆಟ್ ಖಂಡಿತ ಎಂಬ ಸುದ್ದಿ ಇದೆ. ಅತ್ತ ಹಾಲಿ ಶಾಸಕ ಜಿ. ಬಿ. ಜ್ಯೋತಿಗಣೇಶ್ ತನಗೆ ಬಿಜೆಪಿ ಟಿಕೆಟ್ ಕೈ ತಪ್ಪಲು ಕಾರಣವೇ ಇಲ್ಲ ಎಂದು ಹೇಳುತ್ತಿದ್ದಾರೆ.

2013ರ ಚುನಾವಣೆ ಸೋಲು; ಸೊಗಡು ಶಿವಣ್ಣ 1994ರಲ್ಲಿ ಮೊದಲ ಬಾರಿಗೆ ತುಮಕೂರು ನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಶಾಸಕರಾಗಿ ಆಯ್ಕೆಯಾದರು. ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವರಾಗಿದ್ದರು, ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಪರಿಸರ ಖಾತೆ ಸಚಿವರಾಗಿದ್ದರು. ಆದರೆ 2013ರ ಚುನಾವಣೆಯಲ್ಲಿ ಸೋಲು ಕಂಡರು.
ತುಮಕೂರು ನಗರದಲ್ಲಿ 2013ರ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಗೊಂದಲ ಉಂಟಾಯಿತು. ಕೆಜೆಪಿ ಅಭ್ಯರ್ಥಿ ಜಿ. ಬಿ. ಜ್ಯೋತಿ ಗಣೇಶ್ 40,073 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ಬಿಜೆಪಿ ಅಭ್ಯರ್ಥಿ ಸೊಗಡು ಶಿವಣ್ಣ 13,159 ಮತಗಳನ್ನು ಮಾತ್ರ ಪಡೆದರು. ತುಮಕೂರು ನಗರ ಕಾಂಗ್ರೆಸ್ ಪಾಲಾಯಿತು. 43,681 ಮತಗಳನ್ನು ಪಡೆದ ಡಾ. ರಫೀಕ್ ಅಹಮ್ಮದ್ ಎಸ್. ಶಾಸಕರಾಗಿ ಆಯ್ಕೆಯಾದರು.
2018ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಬಿ. ಎಸ್. ಯಡಿಯೂರಪ್ಪ ಆಪ್ತರಾದ ತುಮಕೂರು ಸಂಸದ ಜಿ. ಎಸ್. ಬಸವರಾಜು ಪುತ್ರ ಜಿ. ಬಿ. ಜ್ಯೋತಿ ಗಣೇಶ್ ಕೈ ಸೇರಿತು. ಸೊಗಡು ಶಿವಣ್ಣ, "2018ರ ಚುನಾವಣೆಯಲ್ಲಿ ಸ್ಪರ್ಧಿಸದಂತೆ ವರಿಷ್ಠರು ನನ್ನನ್ನು ತಡೆದರು. ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ಇದೆಲ್ಲವನ್ನೂ ಗಮನಿಸಿ ಈ ಬಾರಿಯ ಟಿಕೆಟ್ ಕೊಡಲಿದ್ದಾರೆ" ಎಂದು ಹೇಳಿದ್ದಾರೆ.
ಭಾನುವಾರದಿಂದ ತುಮಕೂರು ನಗರದಲ್ಲಿ ಸೊಗಡು ಶಿವಣ್ಣ ಜೋಳಿಗೆ ಹಿಡಿದು ಪ್ರಚಾರ ಆರಂಭಿಸಿದ್ದಾರೆ. ಪ್ರತಿದಿನ ನಗರದ ಒಂದೊಂದು ವಾರ್ಡ್‌ನಲ್ಲಿ ಪ್ರಚಾರ ನಡೆಸುತ್ತೇನೆ ಎಂದು ಹೇಳಿದ್ದಾರೆ. ಹಾಗಾದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಜಿ. ಬಿ. ಜ್ಯೋತಿ ಗಣೇಶ್ ಅಥವ ಸೊಗಡು ಶಿವಣ್ಣ ಯಾರಿಗೆ? ಎಂಬುದಕ್ಕೆ ಬಿಜೆಪಿ ನಾಯಕರೇ ಉತ್ತರ ಹೇಳಬೇಕು.












Click it and Unblock the Notifications