ಶಿರಾ ಚುನಾವಣೆ; ಕುಸಿದು ಬಿದ್ದ ಅಮ್ಮಾಜಮ್ಮ ಆಸ್ಪತ್ರೆಗೆ ದಾಖಲು
ತುಮಕೂರು, ನವೆಂಬರ್ 01: ಶಿರಾ ಕ್ಷೇತ್ರದ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆ ನವೆಂಬರ್ 3ರಂದು ನಡೆಯಲಿದೆ.
ಭಾನುವಾರ ಜೆಡಿಎಸ್ ಪಕ್ಷದ ಸಮಾವೇಶ ನಡೆಯುತ್ತಿದ್ದ ವೇದಿಕೆಯಲ್ಲೇ ಕುಸಿದು ಬಿದ್ದ ಅಭ್ಯರ್ಥಿ ಅಮ್ಮಾಜಮ್ಮ (60) ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊನೆ ದಿನದ ಬಹಿರಂಗ ಪ್ರಚಾರದ ಅಂಗವಾಗಿ ಸಮಾವೇಶ ಆಯೋಜನೆ ಮಾಡಲಾಗಿತ್ತು.
ಐಬಿ ಸರ್ಕಲ್‌ನಿಂದ ರಾಮಚಂದ್ರಪ್ಪ ಬಯಲು ರಂಗಮಂದಿರದ ತನಕ ಬೃಹತ್ ಜಾಥಾ ನಡೆಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಹಲವಾರು ನಾಯಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಬಳಿಕ ಬೃಹತ್ ಸಮಾವೇಶ ನಡೆಯಿತು. ಈ ವೇದಿಕೆಯಲ್ಲಿಯೇ ಅಮ್ಮಾಜಮ್ಮ ಅವರು ಕುಸಿದು ಬಿದ್ದಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಸಹ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಅಮ್ಮಾಜಮ್ಮ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ ದಿನವೇ ಅವರಿಗೆ ಕೋವಿಡ್ ಸೋಂಕು ತಗುಲಿದ್ದು ಖಚಿತವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡು ಅವರು ಪ್ರಚಾರದಲ್ಲಿ ತೊಡಗಿದ್ದರು.
ನಿರಂತರವಾಗಿ ಪ್ರಚಾರದಲ್ಲಿ ತೊಡಗಿಕೊಂಡ ಕಾರಣ ಸುಸ್ತಾಗಿ ಅವರು ಕುಸಿದು ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಶಿರಾ ಉಪ ಚುನಾವಣೆ ಬಹಿರಂಗ ಪ್ರಚಾರ ಸಂಜೆ 6 ಗಂಟೆಗೆ ಅಂತ್ಯವಾಗಲಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದೆ.
ಶಿರಾದಲ್ಲಿ ಬಿಜೆಪಿಯಿಂದ ಡಾ. ರಾಜೇಶ್ ಗೌಡ, ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ ಅಭ್ಯರ್ಥಿಗಳು. ಬಿ. ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದೆ. ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್ ನೀಡಿದೆ.












Click it and Unblock the Notifications