ನಮ್ಮ ರಕ್ಷಣೆ ಮಾಡಿಕೊಳ್ಳುವುದು ಹೇಗೆಂದು ಗೊತ್ತಿದೆ: ಡಿವಿಎಸ್
ತುಮಕೂರು, ಜುಲೈ 8: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ನಿದರ್ಶನವೇ ತೆಗೆದುಕೊಂಡರೆ ಗೊತ್ತಾಗುತ್ತದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಶನಿವಾರ ಆರೋಪ ಮಾಡಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳುವುದಕ್ಕೆ ಕಾಂಗ್ರೆಸ್ ಬೇರೆ ರೀತಿ ಕಾರ್ಯಾಚರಣೆ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಗಳೂರಿಗೆ ಹೋಗುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
ಜನರ ಜೀವವನ್ನು ಬಲಿ ತೆಗೆದುಕೊಳ್ಳುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ. ಆದ್ದರಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿರಲು ಅರ್ಹರಾ? ಅವರ ಮೌನ ಕೊಡುವ ಅರ್ಥವೇನು? ಇಂಥ ಸನ್ನಿವೇಶದಲ್ಲಿ ಮಂಗಳೂರಿಗೆ ಅವರು ಪ್ರಚಾರಕ್ಕೆ ಹೋಗಬೇಕಿರಲಿಲ್ಲ. ಇದಕ್ಕೂ ಮುನ್ನ ಹೋಗಬೇಕಿದ್ದಾಗ ಅಲ್ಲೊಂದು ಪರಿಶೀಲನಾ ಸಭೆ ಕೂಡ ನಡೆಸಲಿಲ್ಲ ಎಂದರು.
ಕಾನೂನು-ಸುವ್ಯವಸ್ಥೆ ಕಾಪಾಡುವಂತೆ ಅಲ್ಲಿನ ಪೊಲೀಸರಿಗೆ ಖಡಕ್ ಸೂಚನೆ ನೀಡಬೇಕಿತ್ತು. ಆದರೆ ಗಲಭೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುವಂತೆ ಆಡಳಿತ ಪಕ್ಷದ ಪ್ರಮುಖರಿಗೆ ಬೆಂಬಲ ನೀಡಿದರು. ಇನ್ನು ದೇಶದ ಹಿತಕ್ಕೆ ಕೆಲಸ ಮಾಡುವವರಿಗೆ ಹಿಂದೂಪರ ಹಾಗೂ ಕೋಮುವಾದಿ ಎಂಬ ಪಟ್ಟ ಕಟ್ಟಲಾಗುತ್ತಿದೆ ಎಂದು ಹೇಳಿದರು.

ಸಚಿವ ರಮಾನಾಥ್ ರೈ, ಖಾದರ್ ಜನವಿರೋಧಿ ಕೆಲಸ
ಸಚಿವರಾದ ರಮಾನಾಥ್ ರೈ, ಯ.ಟಿ.ಖಾದರ್ ಜನರ ಕೆಲಸ ಮಾಡುವ ಬದಲು ಜನ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ. ಅಶಾಂತಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕೋಮು ಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ. ಜತೆಗೆ ಕೊಲೆಗಳನ್ನು ಮಾಡುವುದಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.

ಪರಿಶೀಲನಾ ಸಭೆ ನಡೆಸದ ಸಿಎಂ
ಇದು ಎಂಥ ಹೇಯ ಕೃತ್ಯ ಅಂದರೆ, ಸದ್ಯಕ್ಕೆ ಗೃಹ ಇಲಾಖೆಯಿಂದ ಪರಮೇಶ್ವರರನ್ನು ಓಡಿಸಿದ್ದಾರೆ. ಗೃಹ ಇಲಾಖೆ ಸಿಎಂ ಕೈಯಲ್ಲಿದೆ. ಆದರೂ ಒಂದು ಪರಿಶೀಲನಾ ಸಭೆ ನಡೆಸಿಲ್ಲ. ನೀವು ಆಡಳಿತದಲ್ಲಿ ಹೇಗೆ ಮುಂದುವರೆಯುತ್ತಿದ್ದೀರಾ ಅನ್ನೋದೇ ಆಶ್ಚರ್ಯ ಎಂಮ್ದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಸಿಎಂ, ಕಾಂಗ್ರೆಸ್ ಕಾರ್ಯಕರ್ತರಲ್ಲ
ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಬೇಕು, ಕಾಂಗ್ರೆಸ್ ಕಾರ್ಯಕರ್ತನ ರೀತಿ ಕೆಲಸ ಮಾಡುವುದು ಸರಿಯಲ್ಲ. ದಕ್ಷಿಣ ಕನ್ನಡದ ಗಲಭೆಯನ್ನು ಕೇಂದ್ರ ಗೃಹ ಇಲಾಖೆ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.

ರಾಜ್ಯದಲ್ಲಿ ಯಾರಿಗೆ ರಕ್ಷಣೆಯಿದೆ?
ಶರತ್ ಬಡ ಆರೆಸ್ಸೆಸ್ ನ ಬಡ ಕಾರ್ಯಕರ್ತ. ಆತನನ್ನು ಕೊಲೆ ಮಾಡಲಾಯಿತು. ರಾಜ್ಯದಲ್ಲಿ ಯಾರಿಗೆ ರಕ್ಷಣೆಯಿದೆ? ಕಲ್ಲಡ್ಕ ಪ್ರಭಾಕರ ಭಟ್ ರಿಗೆ ಜೀವ ಬೆದರಿಕೆ ಬಂದಿದೆ. ಆ ಪ್ರಕರಣದ ವಿಚಾರಣೆಯನ್ನು ಸೈಬರ್ ಕ್ರೈಂ ವಿಭಾಗದವರು ತಕ್ಷಣ ತನಿಖೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಲ್ಲ
ಆರೆಸ್ಸೆಸ್ ಕಾರ್ಯಕರ್ತರಾಗಲಿ ಅಥವಾ ಬಿಜೆಪಿ ಕಾರ್ಯಕರ್ತರಾಗಲಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಲ್ಲ. ರಾಜ್ಯ ಸರಕಾರದಿಂದ ರಕ್ಷಣೆ ಸಿಗದಿದ್ದರೆ ಕಾಪಾಡಿಕೊಳ್ಳುವ ತಾಕತ್ತು ನಮಗಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಚಾಟಿ ಬೀಸಿದರು. ಈ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್, ಶಾಸಕ ಬಿ.ಸುರೇಶ್ ಗೌಡ, ಬಿಜೆಪಿ ಮುಖಂಡರಾದ ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications