ತುಮಕೂರು ಶಾಸಕ ಜ್ಯೋತಿಗಣೇಶ್ ವಿರುದ್ಧ ಪೇಎಂಎಲ್‌ಎ ಅಭಿಯಾನ: ಕಾಂಗ್ರೆಸ್ ಮುಖಂಡನ ಬಂಧನ
‘ಪೇಎಂಎಲ್‌ಎ’ ಶೀರ್ಷಿಕೆಯ ಪೋಸ್ಟರ್ ಅನ್ನು ತುಮಕೂರಿನ ಹಲವಾರು ಜನಪ್ರಿಯ ರಸ್ತೆಗಳು ಮತ್ತು ಗೋಡೆಗಳಲ್ಲಿ ರಾತ್ರೋರಾತ್ರಿ ಅಂಟಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತುಮಕೂರು, ಫೆಬ್ರವರಿ. 28: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಹಲವು ಅಭಿಯಾನಗಳನ್ನು ನಡೆಸುತ್ತಿದ್ದು, ಇದರಲ್ಲಿ ಪೇಸಿಎಂ ಅಭಿಯಾನ ಕೂಡ ಒಂದು. ಇದರ ಭಾಗವಾಗಿರುವ 'ಪೇಎಂಎಲ್‌ಎ' ಪೋಸ್ಟರ್‌ಗಳು ಶನಿವಾರ ತುಮಕೂರಿನಲ್ಲಿ ಕಾಣಿಸಿಕೊಂಡ ನಂತರ ಪೊಲೀಸರು ಯುವ ಕಾಂಗ್ರೆಸ್ ಮುಖಂಡನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ತುಮಕೂರಿನಲ್ಲಿ ಬಿಜೆಪಿ ಶಾಸಕ ಜಿಬಿ ಜ್ಯೋತಿಗಣೇಶ್ ಅವರ ಛಾಯಾಚಿತ್ರ ಮತ್ತು ಕ್ಯೂಆರ್ ಕೋಡ್ ಇರುವ ಪೇಎಂಎಲ್‌ಎ ಪೋಸ್ಟರ್‌ಗಳು ಟೌನ್‌ಹಾಲ್, ಬಿ.ಎಚ್.ರೊಡ್, ಹೊರಪೇಟೆ ಸೇರಿದಂತೆ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದವು. ಇದರ ಬೆನ್ನಲ್ಲೇ ಹಿನ್ನೆಲೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜ್ಯೋತಿಗಣೇಶ್ ಅವರ ಛಾಯಚಿತ್ರವಿರುವ ಪೋಸ್ಟರ್‌ನಲ್ಲಿ "ನೀವು ಯಾವುದೇ ಕೆಲಸ ಮಾಡಲು ಬಯಸಿದರೆ, ಮೊದಲು ನನಗೆ ಪಾವತಿಸಿ" ಎಂದು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 'ಪೇಎಂಎಲ್‌ಎ' ಶೀರ್ಷಿಕೆಯ ಪೋಸ್ಟರ್ ಅನ್ನು ತುಮಕೂರಿನ ಹಲವಾರು ಜನಪ್ರಿಯ ರಸ್ತೆಗಳು ಮತ್ತು ಗೋಡೆಗಳಲ್ಲಿ ರಾತ್ರೋರಾತ್ರಿ ಅಂಟಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ 'ಪೇಸಿಎಂ' ಅಭಿಯಾನ ಆರಂಭಿಸಿತ್ತು. ಡಿಜಿಟಲ್ ಪಾವತಿ ವೇದಿಕೆಯಾದ ಪೇಟಿಎಂ ಮಾದರಿಯಲ್ಲಿ ಪೇಸಿಎಂ (PayCM) ಪೋಸ್ಟರ್‌ಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮುಖ ಮತ್ತು ಕ್ಯೂಆರ್ ಕೋಡ್ ಇದ್ದವು. PayCM ಎಂಬುದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮಾಡಿರುವ 40% ಕಮಿಷನ್ ಆರೋಪ ಸೇರಿದಂತೆ ಆಪಾದಿತ ಭ್ರಷ್ಟಾಚಾರದ ವಿಷಯದ ಕುರಿತು ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಅಭಿಯಾನವಾಗಿದೆ.
ಇದೇ ವೇಳೆ, 'ಪೇಎಂಎಲ್‌ಎ' ಪೋಸ್ಟರ್‌ಗಳಿಂದ ಬಂಧಿಸಲಾಗಿಲ್ಲ, ಶಶಿ ಹುಲಿಕುಂಟೆ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರಿಂದ ಬಂಧಿಸಲಾಗಿದೆ ಎಂದು ತುಮಕೂರು ಪೊಲೀಸರು ತಿಳಿಸಿದ್ದಾರೆ. ಪೋಸ್ಟರ್ ಹಾಕಿದ್ದಕ್ಕೆ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಇದನ್ನು ಪ್ರಶ್ನಿಸಿದ ಶಶಿ ಹುಲಿಕುಂಟೆ ಅವರನ್ನೂ ಬಂಧಿಸಲಾಗಿದೆ ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಶನಿವಾರ, ಗಾಂಧಿನಗರದಲ್ಲಿ ಪೇ ಎಂಎಲ್‌ಎ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದ ನಾಲ್ವರನ್ನು ಬಂಧಿಸಲಾಯಿತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ ಶಶೀ ಹುಲಿಕುಂಟೆ ಠಾಣೆಗೆ ಬಂದು ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಠಾಣೆಗೆ ಬಂದಾಗ ಮಾತ್ರ ಅವರನ್ನು ಬಿಡುಗಡೆ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಅವರು ಜೋರು ಧ್ವನಿಯಲ್ಲಿ ಸಿಬ್ಬಂದಿಗೆ ಬೆದರಿಕೆ ಹಾಕಿದರು. ಬಳಿಕ ಪಿಎಸ್‌ಐಗೂ ಬೆದರಿಕೆ ಹಾಕಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರ ನಂತರ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 186 ರ ಅಡಿಯಲ್ಲಿ ಸಾರ್ವಜನಿಕ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಶಶಿ ಹುಲಿಕುಂಟೆ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದರು. ಆದರೆ, ಕಾಂಗ್ರೆಸ್ ಕಾರ್ಯಕರ್ತರ ಬಂಧನವನ್ನು ಪ್ರಶ್ನಿಸಿದ್ದಕ್ಕೆ ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
"ಪೊಲೀಸರು ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಭ್ರಷ್ಟಾಚಾರದ ಆರೋಪಗಳಿಂದ ಸರ್ಕಾರವನ್ನು ಕಾಪಾಡಲು ಯತ್ನಿಸುತ್ನಿಸುತ್ತಿದ್ದಾರೆ. ಪೋಸ್ಟರ್ ಅಂಟಿಸಿದ್ದಕ್ಕಾಗಿ ಯುವಕರನ್ನು ಬಂಧಿಸಿದ್ದರು. ನಂತರ ಅದನ್ನು ಪ್ರಶ್ನಿಸಿದ ಯುವ ಕಾಂಗ್ರೆಸ್ ನಾಯಕನನ್ನು ಬಂಧಿಸಿದರು" ಎಂದು ಹೆಸರು ಹೇಳಲು ಇಚ್ಛಿಸದ ಜಿಲ್ಲಾ ಯುವ ಘಟಕದ ನಾಯಕ ಆರೋಪಿಸಿದ್ದಾರೆ.












Click it and Unblock the Notifications