ಮದುವೆ ಮಾಡಿಕೊಂಡು ಕ್ವಾರಂಟೈನ್ ಆದ ತುಮಕೂರು ವಧು ವರ
ತುಮಕೂರು, ಜೂನ್ 22: ಕೊರೊನಾ ನಡುವೆಯೂ ಮದುವೆ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಸೋಂಕಿನ ಭಯ ಇದ್ದರೂ, ಅನೇಕ ವಿವಾಹ ಕಾರ್ಯಕ್ರಮಗಳು ನಡೆಯುತ್ತಿವೆ. ಈ ರೀತಿ ಕೊರೊನಾ ಸಮಯದಲ್ಲಿ ಮದುವೆ ಮಾಡಿಕೊಂಡಿದ್ದ ಜೋಡಿ ಈಗ ಕ್ವಾರಂಟೈನ್‌ನಲ್ಲಿದೆ.
ಗುಬ್ಬಿಯ ಹೇರೂರು ಗ್ರಾಮದಲ್ಲಿ ಇತ್ತೀಚಿಗಷ್ಟೆ ಒಂದು ಮದುವೆ ನಡೆದಿತ್ತು. ವರನ ಮನೆ ಆವರಣದಲ್ಲಿ ಮದುವೆ ಮಾಡಲಾಗಿತ್ತು. ಆದರೆ, ಮದುವೆಗೆ ಅಡಿಗೆ ಮಾಡಿದ್ದ ಭಟ್ಟರಿಗೆ ಈಗ ಕೊರೊನಾ ಪಾಸಿಟಿವ್ ವರದಿಯಾಗಿದೆ. ಹೀಗಾಗಿ, ವಧು, ವರರೂ ಸಹ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ಅಡುಗೆ ಭಟ್ಟರಿಗೆ ಅನಾರೋಗ್ಯ ಇದ್ದ ಕಾರಣ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿದ್ದರು. 50 ವರ್ಷದ ಈ ವ್ಯಕ್ತಿಗೆ ಅಲ್ಲಿಂದ ಸೋಂಕು ತಗುಲಿದೆ. ಜೂನ್ 18 ರಂದು ಅಡುಗೆ ಭಟ್ಟನ ಪಾಸಿಟಿವ್ ವರದಿ ಬಂದಿದ್ದು, ಸೋಂಕು ದೃಢವಾಗಿದೆ.

ಅಡಿಗೆ ಭಟ್ಟರಿಗೆ ಸೋಂಕು ದೃಢವಾಗಿದ್ದು, ಇದರಿಂದ ನವ ಜೋಡಿ ಗಿರೀಶ್ ಹಾಗೂ ಮೀನಾಕ್ಷಿ ಕೂಡ ಕ್ವಾರಂಟೈನ್‌ನಲ್ಲಿ ಇರುವಂತಾಗಿದೆ. ಮದುವೆಯ ಕಾರ್ಯಕ್ರಮದ ಕ್ಯಾಮರಾಮ್ಯಾನ್, ಮದುವೆಗೆ ಭಾಗಿಯಾಗಿದ್ದ ಕೆಲವರು ಸೇರಿ ಒಟ್ಟು 56 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.












Click it and Unblock the Notifications