Modi In Tumkur: ರಾತ್ರಿ 8 ಗಂಟೆಯವರೆಗೆ ಬಿಹೆಚ್ ರಸ್ತೆಯಲ್ಲಿ ಸಂಚಾರ ನಿರ್ಬಂಧ: ಬದಲೀ ಮಾರ್ಗಗಳ ವಿವರ ತಿಳಿಯಿರಿ
ತುಮಕೂರು, ಮೇ 5: ಕರ್ನಾಟಕ ಚುನಾವಣೆ ರಂಗೇರಿದೆ, ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ, ಮೇ 5ರಂದು ತುಮಕೂರಿಗೆ ಭೇಟಿ ನೀಡಲಿದ್ದು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನರೇಂದ್ರ ಮೋದಿ ತುಮಕೂರು ಭೇಟಿ ಹಿನ್ನಲೆಯಲ್ಲಿ ಭಾರಿ ಬಿಗಿಬಂದೋಬಸ್ತ್ ಮಾಡಲಾಗಿದೆ. ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಿದ್ದು, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಗರದ ಬಟವಾಡಿ ಜಂಕ್ಷನ್‌ನಿಂದ ಬಿಜಿಎಸ್ ಸರ್ಕಲ್‌ವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರಿಗೆ ಅನುಕೂಲವಾಗುನ ನಿಟ್ಟಿನಲ್ಲಿ ಬದಲೀ ಮಾರ್ಗಗಳಲ್ಲಿ ಸಂಚರಿಸಲು ಕೋರಲಾಗಿದೆ. ಬೆಂಗಳೂರಿನಿಂದ ತುಮಕೂರು ನಗರಕ್ಕೆ ಪ್ರವೇಶಿಸುವ ವಾಹನಗಳು ಬಟವಾಡಿ, ಹನುಮಂತಪುರ, ಸತ್ಯಮಂಗಲ ಮೂಲಕ ಯಲ್ಲಾಪುರ ಅಥವಾ ಅಂತರಸನಹಳ್ಳಿಗೆ ಬಂದು ಶಿರಾ ಗೇಟ್ ಮೂಲಕ ನಗರವನ್ನು ಪ್ರವೇಶಿಸಬಹುದು.

ಶಿರಾ ಕಡೆಯಿಂದ ಬರುವ ವಾಹನಗಳು ಹಳೆಯ ಮಾರ್ಗದಲ್ಲಿ (ಶ್ರೀದೇವಿ ಕಾಲೇಜು ಮುಂಭಾಗ-ಶಿರಾಗೇಟ್) ಸಂಚರಿಸಬಹುದು. ಕುಣಿಗಲ್ ಕಡೆಯಿಂದ ನಗರಕ್ಕೆ ಬರುವವರು ಕುಣಿಗಲ್ ರಿಂಗ್ ರಸ್ತೆಯ ಸರ್ಕಲ್‌ನಿಂದ ಲಕ್ಕಪ್ಪ ಸರ್ಕಲ್ ಮೂಲಕ ನಗರಕ್ಕೆ ಪ್ರವೇಶಿಸಬಹುದು. ತಿಪಟೂರು, ಶಿವಮೊಗ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ಲಕ್ಕಪ್ಪ ಸರ್ಕಲ್‌ನಿಂದ ರಿಂಗ್ ರಸ್ತೆಯಲ್ಲಿ ಕುಣಿಗಲ್ ಸರ್ಕಲ್ ಮೂಲಕ ಬೆಂಗಳೂರು ಕಡೆಗೆ ಸಾಗಬಹುದು. ಬೆಂಗಳೂರು ನಗರದಿಂದ ಕುಣಿಗಲ್ ಕಡೆಗೆ ತೆರಳುವ ವಾಹನಗಳು ಕ್ಯಾತ್ಸಂದ್ರ ಸಮೀಪದ ರಿಂಗ್ ರಸ್ತೆಯ ಮೂಲಕ ಕುಣಿಗಲ್ ಸರ್ಕಲ್‌ನಿಂದ ತೆರಳುವಂತೆ ಸೂಚನೆ ನೀಡಲಾಗಿದೆ.
ಭಾರಿ ಬಂದೋಬಸ್ತ್
ಕಲ್ಪತರು ನಾಡಿಗೆ ಮೋದಿ ಆಗಮನದ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ತ್ ಮಾಡಲಾಗಿದೆ. ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಭದ್ರತೆಯ ನೇತೃತ್ವ ವಹಿಸಿಕೊಂಡಿದ್ದಾರೆ. ನಾಲ್ವರು ಎಎಸ್‌ಪಿ, 13 ಡಿವೈಎಸ್‌ಪಿ, 39 ಸಿಪಿಐ, 84 ಪಿಎಸ್‌ಐ, 93 ಎಎಸ್‌ಐ, 650 ಮುಖ್ಯ ಪೇದೆಗಳು ಹಾಗೂ ಪೊಲೀಸ್ ಸಿಬ್ಬಂದಿ, 40 ಮಹಿಳಾ ಪೊಲೀಸ್, 134 ಹೋಮ್‌ಗಾರ್ಡ್ ಸಿಬ್ಬಂದಿ, 7 ಕೆಎಸ್‌ಆರ್‌ಪಿ ತುಕಡಿಯೊಂದ ಸರ್ಪಗಾವಲು ಹಾಕಲಾಗಿದೆ.












Click it and Unblock the Notifications