ಬಾಣಂತಿ-ಅವಳಿ ಮಕ್ಕಳ ಸಾವಿನ ಕೇಸ್: ತುಮಕೂರು ಜಿಲ್ಲಾಸ್ಪತ್ರೆ ನಾಲ್ವರು ಸಿಬ್ಬಂದಿ ಅಮಾನತು
ತುಮಕೂರು, ನವೆಂಬರ್ 04: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವೈದ್ಯೆ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಘಟನೆ ನಡೆದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆ ಉಷಾ ಹಾಗೂ ಮೂವರು ನರ್ಸ್ ಅನ್ನು ಕರ್ತವ್ಯಲೋಪದ ಆರೋಪದಡಿ ಅಮಾನತುಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ತುಮಕೂರಿನ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದ ತಾಯಿ ಮತ್ತು ಅವಳಿ ಮಕ್ಕಳ ಬಗ್ಗೆ ವೈದ್ಯರು ನಿರ್ಲಕ್ಪ್ಯ ತೋರಿದ್ದರು. ವೈದ್ಯೆಯ ಬಳಿ ಪರಿಪರಿಯಾಗಿ ಬೇಡಿಕೊಂಡರೂ ತಾಯಿ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯಿಂದ ವಾಪಸ್ ಕಳುಹಿಸಿದ್ದರು. ಈ ರೀತಿಯ ನಿರ್ಲಕ್ಷ್ಯದಿಂದಲೇ ತಾಯಿ ಮತ್ತು ಅವಳಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ತುಮಕೂರು ಜಿಲ್ಲಾಸ್ಪತ್ರೆಗೆ ಸುಧಾಕರ್ ಭೇಟಿ, ಪರಿಶೀಲನೆ
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ಹೇಯಕೃತ್ಯದ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಯಿತು. ಇಡೀ ಪ್ರಕರಣವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ವತಃ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಗುರುವಾರ ರಾತ್ರಿ 9.30ರ ಸುಮಾರಿಗೆ ತುಮಕೂರಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ವೈದ್ಯರೊಂದಿಗೆ ಸಭೆ ನಡೆಸಿದ ಸಚಿವರು, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ತದನಂತರದಲ್ಲಿ ಕರ್ತವ್ಯಲೋಪದ ಅಡಿ ಒಬ್ಬ ವೈದ್ಯೆ ಹಾಗೂ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಿದರು.

ಸಚಿವ ಸುಧಾಕರ್ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
ತುಮಕೂರು ಜಿಲ್ಲೆಯ ವೈದ್ಯರ ನಿರ್ಲಕ್ಷದಿಂದಾಗಿ ನಡೆದ ಬಾಣಂತಿ ಮತ್ತು ಎರಡು ಹಸುಗೂಸುಗಳ ಸಾವಿಗೆ ಕಾರಣಕರ್ತರಾದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಕ್ಷಣ ರಾಜೀನಾಮೆ ನೀಡಬೇಕು. ಆರೋಪಿ ವೈದ್ಯರನ್ನು ಸೇವೆಯಿಂದ ವಜಾಗೊಳಿಸಿ ಇಡೀ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕೊರೊನಾ ಕಾಲದಿಂದ ಆರೋಗ್ಯ ಇಲಾಖೆಯ ಬೇಜವಾಬ್ದಾರಿ ನಡವಳಿಕೆಗಳಿಂದಾಗಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಡಾ.ಸುಧಾಕರ್ ಅವರೇ ಆರೋಗ್ಯ ಸಚಿವರಾಗಿ ಮುಂದುವರಿದರೆ ಸರಣಿ ವೈದ್ಯಕೀಯ ಹತ್ಯೆಗಳು ಮುಂದುವರಿಯುವ ಸಾಧ್ಯತೆಗಳಿವೆ. ನೇಮಕಾತಿಯಿಂದ ಹಿಡಿದು ವರ್ಗಾವಣೆವರೆಗೆ ಎಲ್ಲವೂ ದುಡ್ಡಿನ ಬಲದಿಂದಲೇ ನಡೆಯುತ್ತಿರುವ ಕಾರಣ ಯಾವ ಅಧಿಕಾರಿಯೂ ಯಾವ ಸಚಿವರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಕರ್ತವ್ಯಭ್ರಷ್ಟ ಅಧಿಕಾರಿಗಳನ್ನು ಪ್ರಶ್ನಿಸುವ-ಶಿಕ್ಷಿಸುವ ನೈತಿಕತೆ ಭ್ರಷ್ಟ ಸಚಿವರಿಗೂ ಇಲ್ಲದಂತಾಗಿದೆ.

ಇದು ಜನರನ್ನು ಸಾಯಿಸುವ ಸರ್ಕಾರ ಎಂದ ಸಿದ್ದರಾಮಯ್ಯ
ಗುಂಡಿಬಿದ್ದ ರಸ್ತೆಗಳಲ್ಲಿ ಜನ ಬಿದ್ದು ಸಾಯುತ್ತಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದವರೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 40 ಪರ್ಸೆಂಟ್ ಕಮಿಷನ್ ನೀಡಲಿಕ್ಕಾಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ಜನರನ್ನು ಸಾಯಿಸುವ ಸರ್ಕಾರವೇ ಹೊರತು ಬದುಕಿಸುವ ಸರ್ಕಾರ ಅಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ತುಮಕೂರಿನಲ್ಲಿ ನಡೆದ ತಾಯಿ-ಮಕ್ಕಳ ಸಾವಿನ ಘಟನೆ ತಿಳಿಯಿರಿ
ತುಮಕೂರಿನಲ್ಲಿ ವಾಸವಾಗಿರುವ ತಮಿಳುನಾಡು ಮೂಲದ 30 ವರ್ಷದ ಮಹಿಳೆ ಕಸ್ತೂರಿ ಎಂಬುವವರಿಗೆ ನವೆಂಬರ್ 2ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿ, ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ವೈದ್ಯರು ಚಿಕಿತ್ಸೆ ನೀಡುವುದಕ್ಕೆ ನಿರಾಕರಿಸಿದ್ದರು. ಇದಲ್ಲದೇ ತುಂಬು ಗರ್ಭಿಣಿಯನ್ನು ವಾಪಸ್ ಕಳುಹಿಸಿದ್ದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದೇ ಕಸ್ತೂರಿ ಅನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದರು. ಆದರೆ ಹಣವಿಲ್ಲದ ಕಾರಣ ಮಹಿಳೆಯು ಮನೆಗೆ ಹಿಂತಿರುಗಿದ್ದರು. ನವೆಂಬರ್ 3ರಂದು ಕಸ್ತೂರಿ ಒಂದು ಮಗುವಿಗೆ ಜನ್ಮ ನೀಡಿದ್ದು, ಎರಡನೇ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಇದೇ ವೇಳೆ ಅವಳಿ ಮಕ್ಕಳು ಸಹ ಸಾವನ್ನಪ್ಪಿದ್ದು, ಈ ತಾಯಿ ಮತ್ತು ಮಕ್ಕಳ ಸಾವಿಗೆ ಜಿಲ್ಲಾಸ್ಪತ್ರೆಯ ಸಿಬ್ಬಂದಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು.












Click it and Unblock the Notifications