ತುಮಕೂರು : ಸಿದ್ದಗಂಗಾ ಮಠದ ಆವರಣದಲ್ಲಿ ವ್ಯಕ್ತಿ ಕೊಲೆ
ತುಮಕೂರು, ಫೆ.9 : ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಆವರಣದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಕ್ಯಾತಸಂದ್ರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಮೃತಪಟ್ಟ ವ್ಯಕ್ತಿಯನ್ನು ಚಾಮರಾಜನಗರ ಮೂಲದ ಚಿಕ್ಕಮಾದಪ್ಪ (23) ಎಂದು ಗುರುತಿಸಲಾಗಿದೆ. ಸಿದ್ದಗಂಗಾ ಮಠದ ಆವರಣದಲ್ಲಿರುವ ಶಾಲೆಯ ಕೊಠಡಿಯಲ್ಲಿ ಸೋಮವಾರ ಬೆಳಗ್ಗೆ ಚಿಕ್ಕಮಾದಪ್ಪ ಮೃತದೇಹ ಪತ್ತೆಯಾಗಿದೆ. ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.

ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಜಾತ್ರೆಗೆ ಚಿಕ್ಕಮಾದಪ್ಪ ಆಗಮಿಸಿದ್ದು ಕಳೆದ ನಾಲ್ಕು ದಿನಗಳಿಂದ ಮಠದ ಆವರಣದಲ್ಲಿನ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಚಿಕ್ಕಮಾದಪ್ಪ ಅವರ ಬ್ಯಾಗ್‌ನಲ್ಲಿ ಅವರ ವಿಳಾಸ ಪತ್ತೆಯಾಗಿದ್ದು, ಇದರಿಂದ ಅವರು ಚಾಮರಾಜನಗರದವರು ಎಂದು ಗುರುತಿಸಲಾಗಿದೆ.[ಸಿದ್ಧಗಂಗಾ ಶ್ರೀ ಆಶೀರ್ವಾದ ಪಡೆದ ಅಣ್ಣಾ ಹಜಾರೆ]
ಕ್ಯಾತಸಂದ್ರ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ತುಮಕೂರು ಎಸ್ಪಿ ಲಕ್ಷಣ್ ಸ್ಥಳಕ್ಕೆ ಆಗಮಿಸಿದ್ದಾರೆ. ಚಿಕ್ಕಮಾದಪ್ಪ ಅವರ ಒಂದು ಕಾಲು ಉನಗೊಂಡಿದ್ದು, ಸಂಬಂಧಿಕರಿಗಾಗಿ ಹುಡುಕಾಟ ನಡೆಯುತ್ತಿದೆ. [ಲೋಕ ಜಂಗಮ : ಸಿದ್ದಗಂಗಾಶ್ರೀ ಸಾಕ್ಷ್ಯಚಿತ್ರ ಲೋಕಾರ್ಪಣೆ]
ಚಿಕ್ಕಮಾದಪ್ಪ ಮಠಕ್ಕೆ ಸೇರಿದ ವ್ಯಕ್ತಿಯಲ್ಲ, ಶಾಲೆಯಲ್ಲಿ ಮಲಗಿದ್ದ ಅವರನ್ನು ಸೋಮವಾರ ಮುಂಜಾನೆ ಅಪರಿಚಿತರು ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಲಕ್ಷಣ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications