ತುಮಕೂರಿನ ಬೃಹತ್ ಸಾಧನಾ ಸಮಾವೇಶ: ವೇದಿಕೆಯಲ್ಲೇ ಎಲ್ಲಾ ಫಲಾನುಭವಿಗಳಿಗೆ ಸವಲತ್ತು ವಿತರಿಸಲು ಸಚಿವ ಪರಮೇಶ್ವರ ಸೂಚನೆ

ತುಮಕೂರು: ಮೇ 20ರಂದು ನಗರದಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಮೂರು ವರ್ಷಗಳ ಬೃಹತ್ ಸಾಧನಾ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಫಲಾನುಭವಿಗಳಿಗೂ ಅಂದೇ, ಆ ಕ್ಷಣದಲ್ಲೇ ಸವಲತ್ತುಗಳನ್ನು ಕಡ್ಡಾಯವಾಗಿ ವಿತರಿಸಬೇಕು ಎಂದು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕರ್ನಾಟಕ ಸರ್ಕಾರದ 3 ವರ್ಷಗಳ ಸಾಧನೆ ಸಂಭ್ರಮ ಹಾಗೂ ತುಮಕೂರು ಜಿಲ್ಲೆಯ ಕಂದಾಯ ಇಲಾಖೆ ಸೇರಿದಂತೆ ಇತರೆ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುವ ಬೃಹತ್ ಕಾರ್ಯಕ್ರಮದ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Karnataka Government

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಭಾಗವಹಿಸುವ ಈ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ಸವಲತ್ತುಗಳನ್ನು ವಿತರಣೆ ಮಾಡಿದರೂ ಇನ್ನಿತರೆ ಫಲಾನುಭವಿಗಳಿಗೆ ಅಂದೇ ಆ ಕ್ಷಣದಲ್ಲೇ ಸವಲತ್ತುಗಳನ್ನು ಹಾಗೂ ಹಕ್ಕುಪತ್ರಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಈ ಹಿಂದೆ ಕೆಲವೊಮ್ಮೆ ವೇದಿಕೆಯಲ್ಲಿ ಸಾಂಕೇತಿಕವಾಗಿ ಹಕ್ಕುಪತ್ರಗಳನ್ನು ನೀಡಿ ಆನಂತರ ಇತರೆ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲು ತೀರ ವಿಳಂಬವಾಗುವ ಸಾಧ್ಯತೆಗಳ ಬಗ್ಗೆ ಕೇಳಿದ್ದೇನೆ. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಡಳಿತ ಅಂತಹ ತಪ್ಪುಗಳನ್ನು ಮಾಡಬಾರದು. ಫಲಾನುಭವಿಗಳಿಗೆ ಅಂದೇ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಹಕ್ಕುಪತ್ರಗಳನ್ನು ಹಾಗೂ ಸವಲತ್ತುಗಳನ್ನು ವಿತರಿಸಲು ಕ್ರಮವಹಿಸಬೇಕು. ಈ ಸಂಬಂಧ ಪ್ರತ್ಯೇಕವಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಫಲಾನುಭವಿಗಳು ಕುಳಿತುಕೊಳ್ಳುವ ಸ್ಥಳದಲ್ಲಿಯೇ ಹಕ್ಕುಪತ್ರ ಹಾಗೂ ಇತರೆ ಸೌಲಭ್ಯಗಳನ್ನು ವಿತರಿಸಲು ಸಿದ್ಧತೆ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಜಿಲ್ಲೆಯಾದ್ಯಂತ ಎಲ್ಲಾ 10 ತಾಲ್ಲೂಕುಗಳಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಈ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಈ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು ಸಂಬಂಧಿಸಿದ ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳನ್ನು ಆಯಾ ತಾಲ್ಲೂಕುಗಳ ಇತರೆ ಪ್ರದೇಶಗಳಿಂದ ಹೊರಡುವ ಜಾಗದಲ್ಲಿಯೇ ಫಲಾನುಭವಿಗಳಿಗೆ ಬೆಳಗಿನ ಉಪಹಾರ ನಂತರವೇ ಬಸ್ಸುಗಳು ಹೊರಡಬೇಕು. ಈ ಸಂಬಂಧ ಫಲಾನುಭವಿಗಳ ಸುರಕ್ಷತೆ ಹಾಗೂ ಉಪಚಾರದಲ್ಲಿ ಯಾವುದೇ ಕೊರತೆ ಆಗಬಾರದು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮಕ್ಕಾಗಿ ತುಮಕೂರು ನಗರಕ್ಕೆ ಜಿಲ್ಲೆಯ ಇತರೆ ತಾಲ್ಲೂಕುಗಳಿಂದ ಫಲಾನುಭವಿಗಳನ್ನು ಕರೆತರಲು ಸರ್ಕಾರಿ, ಖಾಸಗಿ ಬಸ್ಸುಗಳು ಸೇರಿದಂತೆ ಸುಮಾರು 3000 ಬಸ್ಸುಗಳು ನಗರಕ್ಕೆ ಆಗಮಿಸಲಿದ್ದು, ಫಲಾನುಭವಿಗಳು ದೂರದಿಂದ ಕಾರ್ಯಕ್ರಮದ ಜಾಗಕ್ಕೆ ನಡೆದುಕೊಂಡು ಬರಲು ಅವಕಾಶ ನೀಡದೆ ಕಾರ್ಯಕ್ರಮದ ಜಾಗದಲ್ಲಿಯೇ ಬಸ್ಸುಗಳು ಫಲಾನುಭವಿಗಳನ್ನು ಇಳಿಸಿ, ಕಾರ್ಯಕ್ರಮದ ನಂತರ ಫಲಾನುಭವಿಗಳನ್ನು ಕರೆದೊಯ್ಯಲು ವ್ಯವಸ್ಥೆ ಆಗಬೇಕು. ನಗರ ಭಾಗದಲ್ಲಿ ವಾಹನ ಸಂಚಾರ ಅಥವಾ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆಯಾಗಬಹುದು. ಅದಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೂಕ್ತ ನಿಲುಗಡೆ ಪ್ರದೇಶ ಗುರುತಿಸಿ ನಿರ್ದಿಷ್ಟ ತಾಲ್ಲೂಕುಗಳ ವಾಹನಗಳು ನಿರ್ದಿಷ್ಟ ನಿಲುಗಡೆಯಲ್ಲಿಯೇ ನಿಲ್ಲುವಂತೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ತುಮುಲ್ ವತಿಯಿಂದ ಮಜ್ಜಿಗೆ, ನೀರಿನ ವ್ಯವಸ್ಥೆ ಆಗಬೇಕು. ಅಲ್ಲದೆ, ಫಲಾನುಭವಿಗಳು ಸುಲಭವಾಗಿ ತಮ್ಮ ಜಾಗಕ್ಕೆ ಹೋಗಿ ಕುಳಿತುಕೊಳ್ಳಲು ಅಥವಾ ನೀರು ಕುಡಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.

ತುಮಕೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಸ್ವಚ್ಛತೆ ಹಾಗೂ ಸುಂದರವಾಗಿ ಕಾಣಿಸಲು ವ್ಯವಸ್ಥೆ ಕೈಗೊಳ್ಳಬೇಕು. ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಫಲಾನುಭವಿಗಳು ಆಗಮಿಸುವುದರಿಂದ ಅವರಿಗೆ ಸೂಕ್ತ ರೀತಿಯ ಸಂಚಾರಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರು ಸೂಚಿಸಿದರು.

ಕಾರ್ಯಕ್ರಮಕ್ಕಾಗಿ ಸಚಿವ ಸಂಪುಟದ ಎಲ್ಲಾ ಸಚಿವರು, ಹಿರಿಯ ಅಧಿಕಾರಿಗಳು ಆಗಮಿಸುವುದರಿಂದ ಯಾವುದೇ ಕೊರತೆಯಾಗದಂತೆ ಅವರಿಗೆ ಆತಿಥ್ಯದ ವ್ಯವಸ್ಥೆಯಾಗಬೇಕು. ಈಗಾಗಲೇ ತುಮಕೂರು ಮಾದರಿ ಎಂಬ ಪರಿಕಲ್ಪನೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಜನಜನಿತವಾಗಿದೆ. ಮುಖ್ಯಮಂತ್ರಿಗಳ ಕಾರ್ಯಕ್ರಮ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಾಗಿರುವುದರಿಂದ ರಾಜ್ಯ ಸರ್ಕಾರಕ್ಕೆ ತುಮಕೂರಿನ ಬಗ್ಗೆ ವಿಶೇಷ ಆಸಕ್ತಿ ಹಾಗೂ ವಿಶ್ವಾಸ ಇರುತ್ತದೆ.

ಈ ಹಿನ್ನೆಲೆಯಲ್ಲಿ ತುಮಕೂರು ಮಾದರಿ ಎಂಬ ಬಗ್ಗೆ ಯಾವುದೇ ಕೊರತೆಯಿಲ್ಲದಂತೆ ಅತ್ಯಂತ ಶಿಸ್ತುಬದ್ಧವಾಗಿ ಗೊಂದಲಗಳಿಗೆ ಆಸ್ಪದ ನೀಡದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ. ಸೇರಿದಂತೆ ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲೆಯ ಇತರೆ ತಾಲ್ಲೂಕುಗಳ ತಹಶೀಲ್ದಾರ್, ಇನ್ನಿತರೆ ತಾಲ್ಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+