'ಸಮಾವೇಶಗಳಿಂದ 15 ಸೀಟು ಗೆಲ್ಲುತ್ತೇವೆ ನೋಡ್ತೀರಿ'!
ತುಮಕೂರು, ಜ.19: ಹಿಂದುಳಿದ ವರ್ಗಗಳ ಓಲೈಕೆಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಮಾವೇಶಗಳ ಹಾದಿ ಹಿಡಿದ ಬೆನ್ನಲೇ ಜೆಡಿಎಸ್ ಕೂಡಾ ಸಮಾವೇಶಗಳ ಮೂಲಕ ಉತ್ತರ ನೀಡುತ್ತಿದೆ. ಸಾಲು ಸಾಲು ಸಮಾವೇಶಗಳಾನ್ನು ಹಮ್ಮಿಕೊಳ್ಳುವ ಮೂಲಕ ಮುಂದಿನ ಲೋಕಸಭೆ ಚುನಾವಣೆಯಲ್ಲಿ 15ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜ.22 ರಂದು ಜೆಡಿಎಸ್ ಪಕ್ಷದ ವತಿಯಿಂದ ಮಹಿಳಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಜ.29 ರಂದು ಬೆಂಗಳೂರು ನಗರದಲ್ಲಿ ಯುವ ಜನತಾ ಮೆರವಣಿಗೆ, ಫೆ.2 ರಂದು ಹಿರಿಯೂರಿನಲ್ಲಿ ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಯಾದವ ಸಮಾವೇಶ, ಫೆ.9 ರಂದು ರಾಯಚೂರಿನಲ್ಲಿ ರೈತರ ಸಮಾವೇಶ, ಫೆ 2ನೇ ವಾರದಲ್ಲಿ ತೃತೀಯ ರಂಗದ ಸಮಾವೇಶ ಆಯೋಜಿಸುತ್ತಿರುವುದಾಗಿ ಕುಮಾರಸ್ವಾಮಿ ಮಾಹಿತಿ ನೀಡಿದರು.
ಸಮಾವೇಶಗಳ ಯಶಸ್ಸಿನ ಮೂಲಕ ಜನತೆಗೆ ಹತ್ತಿರವಾಗುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 15ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.[ದೇವೇಗೌಡ, ಅಹಿಂದ, ಮದ್ಯ, ಮೀಸಲಾತಿ ಬಗ್ಗೆ ಸಿದ್ದು]
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಹೊರಬೀಳಲಿದೆ ಎಂದರು. ತುಮಕೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹಲವಾರು ಅಭ್ಯರ್ಥಿಗಳು ಕಾತುರದಲ್ಲಿದ್ದು ಈ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಣಯ ಪ್ರಕಟಿಸುವುದಾಗಿ ಹೇಳಿದರು.

ಕುಟುಂಬದಿಂದ ಒಬ್ಬರೇ: ದೇವೇಗೌಡರನ್ನು ಹೊರತು ಪಡಿಸಿ ನಮ್ಮ ಕುಟುಂಬದ ಯಾರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಂತೆ ತೀರ್ಮಾನ ಕೈಗೊಂಡಿದ್ದೇವೆ. ಒಂದು ವೇಳೆ ಯಾವುದೇ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಸಿಗದೆ ಹೋದರೆ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರಾದರೊಬ್ಬರು ಅನಿವಾರ್ಯವಾಗಿ ಸ್ಪರ್ಧಿಸುವುದು ಖಚಿತ ಎಂದು ತಿಳಿಸಿದರು.
ಮೋದಿ ಅಲೆ ಪ್ರಭಾವ ಬೀರುವುದಿಲ್ಲ : ಯಡಿಯೂರಪ್ಪನವರು ಮರಳಿ ಬಿಜೆಪಿ ಪಕ್ಷಕ್ಕೆ ಸೇರಿರುವುದರಿಂದ ಜೆಡಿಎಸ್ ಗೆ ಅನುಕೂಲವಾಗಿದೆ.ಕರ್ನಾಟಕದಲ್ಲಿ ಮೋದಿ ಅಲೆ ಪ್ರಭಾವ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಿಂದ ಜಾತಿ ಸಮಾವೇಶ: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮಂತ್ರ ಜಪಿಸುವ ಬದಲು ಜಾತಿ ಆಧಾರಿತ ಸಮಾವೇಶ ಹಮ್ಮಿಕೊಂಡು ಜನತೆಯ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಎತ್ತಿನ ಹೊಳೆ ತೀರ್ಮಾನ ಪ್ರಕಟಿಸಲಿ: ಎತ್ತಿನ ಹೊಳೆ ಯೋಜನೆ ಬಗ್ಗೆ ಸರ್ಕಾರ ತನ್ನ ತೀರ್ಮಾನ ಪ್ರಕಟಿಸಲಿ. ಭದ್ರ ಮೇಲ್ದಂಡೆ ಯೋಜನೆ ಮೂಲಕ ಬಯಲು ಸೀಮೆಗೆ ನೀರು ಹರಿಸುವ ಯೋಜನೆ ಗತಿ ಏನಾಗಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಹಿರಂಗ ಮಾಡಲಿ ಎಂದು ಎಚ್‌ಡಿಕೆ ಆಗ್ರಹಿಸಿದರು.












Click it and Unblock the Notifications