ಇನ್ನೊಂದು ತಿಂಗಳಲ್ಲಿ ಜೆಡಿಎಸ್ ಸಚಿವರೊಬ್ಬರ ರಾಜೀನಾಮೆಯಂತೆ, ಯಾರದು?
Recommended Video

ತುಮಕೂರು, ಜೂನ್ 7: ಇನ್ನು ಒಂದು ತಿಂಗಳಲ್ಲಿ ಸಂಪುಟದಲ್ಲಿ ಇರುವ ಜೆಡಿಎಸ್ ನ ಸಚಿವರೊಬ್ಬರು ರಾಜೀನಾಮೆ ಕೊಡುತ್ತಾರಂತೆ. ಅದರ ಜತೆಗೆ ಪಕ್ಷದ ಪಾಲಿಗೆ ಇನ್ನೂ ಒಂದು ಸಚಿವ ಸ್ಥಾನ ಸೇರಿಸಿ ಎರಡು ಅವಕಾಶ ಇದೆ. ಆ ಪೈಕಿ ಒಂದನ್ನು ನನಗೆ ನೀಡುವ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ ಎಂದರು ಶಿರಾ ಶಾಸಕ ಬಿ.ಸತ್ಯನಾರಾಯಣ.
ಸ್ವತಃ ದೇವೇಗೌಡರೇ ನನ್ನನ್ನು ಮನೆಗೆ ಕರೆಸಿಕೊಂಡು ಮಾತನಾಡಿದರು ಎಂಬ ವಿಚಾರವನ್ನು ಮಾಧ್ಯಮಗಳ ಎದುರು ಹೇಳಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿ ಹಲವು ಪ್ರಶ್ನೆಗಳಿಗೆ ಕಾರಣವಾಯಿತು. ಈಗಿನ್ನೂ ಸಂಪುಟ ವಿಸ್ತರಣೆ ಆಗಿದೆ. ಒಂದು ತಿಂಗಳಲ್ಲಿ ರಾಜೀನಾಮೆ ನೀಡುವವರು ಯಾರು ಎಂಬ ಪತ್ರಕರ್ತರ ಪ್ರಶ್ನೆಗೆ, ನನಗೂ ಯಾರಂತ ಗೊತ್ತಿಲ್ಲ ಎಂದರು ಸತ್ಯನಾರಾಯಣ.
ನನಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಉಪಸಭಾಪತಿ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ ದೇವೇಗೌಡರು. ಆದರೆ ಉಪ ಸಭಾಪತಿ ಸ್ಥಾನ ಒಪ್ಪಿಕೊಳ್ಳದಂತೆ ನನ್ನ ಸಮಾಜದ ಬಾಂಧವರು ಹೇಳಿದ್ದಾರೆ. ಹಾಗಾಗಿ ಸದ್ಯ ಒಪ್ಪಿಕೊಳ್ಳುವುದಿಲ್ಲ. ಸದ್ಯಕ್ಕೆ ಶಾಸಕನಾಗಿ ಮುಂದುವರಿಯುತ್ತೇನೆ ಎಂದು ಹೇಳಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಅನ್ನೋದು ನನ್ನ ಆಶಯ. ನಾನು ಬಿಜೆಪಿ ಗೆ ಹೋಗುವ ಪ್ರಶ್ನೆಯೇ ಇಲ್ಲ. ನನಗೆ ಸಚಿವ ಸ್ಥಾನ ಸಿಗದಂತೆ ಕೊನೆ ಘಳಿಗೆಯಲ್ಲಿ ಕುತಂತ್ರ ನಡೆದಿರುವುದು ಸತ್ಯ. ಅದು ಬಹಿರಂಗವಾಗಿ ಹೇಳಲು ಸಾದ್ಯವಿಲ್ಲ. ಅದು ಪಕ್ಷದ ವಿಚಾರ ಎನ್ನುವ ಮೂಲಕ ಮತ್ತಷ್ಟು ಕುತೂಹಲ ಇದೇ ಹೆಚ್ಚಿಸಿದರು.
ಬಿ.ಸತ್ಯನಾರಾಯಣ್ ಗೆ ಸಚಿವ ಸ್ಥಾನ ನೀಡದಿದಕ್ಕೆ ಕುಂಚಿಟಿಗ ಒಕ್ಕಲಿಗ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿರಾ ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ ಮುಖಂಡರು, ಜೆಡಿಎಸ್ ವರಿಷ್ಠರ ನಡೆಯನ್ನು ಖಂಡಿಸಿದ್ದಾರೆ.
ಇನ್ನು ಒಂದು ತಿಂಗಳಲ್ಲಿ ಸತ್ಯನಾರಾಯಣ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಕುಂಚಿಟಿಗ ಸಮುದಾಯಕ್ಕೆ ಸೇರಿದ ನಗರಸಭಾ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು ಸಾಮೂಹಿಕ ರಾಜೀನಾಮೆ ಕೊಡುವ ಎಚ್ಚರಿಕೆ ನೀಡಿದ್ದಾರೆ. ಇದಕ್ಕೂ ವರಿಷ್ಠರು ಸೊಪ್ಪು ಹಾಕದಿದ್ದರೆ ವಿಧಾನ ಸೌಧಕ್ಕೂ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದ್ದಾರೆ.
ಈ ಸಭೆಯಲ್ಲಿ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ನರೇಂದ್ರ ಬಾಬು, ಕುಂಚಿಟಿಗ ಸಂಘದ ಜಿಲ್ಲಾಧ್ಯಕ್ಷ ದೊಡ್ಡಲಿಂಗಪ್ಪ ಸೇರಿದಂತೆ ನೂರಾರು ಮುಖಂಡರು ಹಾಜರಿದ್ದರು.











Click it and Unblock the Notifications