ಪಾವಗಡದ ಆಂಜನೇಯ ದೇವಸ್ಥಾನದಲ್ಲಿ 60,000 ರೂಪಾಯಿ ಮೌಲ್ಯದ ವಸ್ತುಗಳು ಕಳವು
ತುಮಕೂರು, ಮೇ. 25: ದೇವಸ್ಥಾನಗಳಿಗೆ ಹೋದವರು ದೇವರಿಗೆ ಕೈಮುಗಿದು ಕಾಣಿಕೆ ಹುಂಡಿಗೆ ತಮ್ಮ ಕೈಲಾದಷ್ಟು ಹಣ ಹಾಕಿ ಬರುತ್ತಾರೆ. ಆದರೆ, ಅದೇ ದೇವಸ್ಥಾನಕ್ಕೆ ಹೋಗಿ ಅಲ್ಲಿರುವ ಕಾಣಿಕೆ ಹುಂಡಿಯನ್ನೇ ಹೊಡೆದು ಹಣ ಕದಿಯುವವರು, ದೇವಸ್ಥಾನದ ವಸ್ತುಗಳನ್ನು ಕದಿಯುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿಯೂ ದೇವಸ್ಥಾನವೊಂದರಲ್ಲಿ ಅಂತಹದ್ದೆ ಘಟನೆ ವರದಿಯಾಗಿದೆ.
ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಪೆಂಡ್ಲಿಜೀವಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕನ್ನ ಹಾಕಿರುವ ಕಿಡಿಗೇಡಿಗಳು ಸುಮಾರು 60,000 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಬುಧವಾರ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಗರ್ಭಗುಡಿಯ ಬಾಗಿಲು ಮುರಿದು ಒಳಗಿದ್ದ ನುಗ್ಗಿರುವ ಕಳ್ಳರು ದೇವಾಲಯದ ಅಮೂಲ್ಯ ವಸ್ತುಗಳಿಗೆ ಕನ್ನ ಹಾಕಿದ್ದಾರೆ.

ಗರ್ಭಗುಡಿಯ ಒಳಗಿದ್ದ ಬೆಳ್ಳಿಯ ಗದೆ, ಮುಖವಾಡ, ಬೆಳ್ಳಿ ಕಿರೀಟ, ಕೋರೆ ಮೀಸೆ, ಕಣ್ಣುಗಳು, ಉಡದಾರ, ಪಾದಗಳು, ಕುತ್ತಿಗೆ ಚಂದ್ರಹಾರ, ಸೀತಾದೇವಿ ಕೊರಳ್ಳಲಿದ್ದ ಸರಗಳನ್ನು ಹಾಗೂ ಕಾಣಿಕೆ ಹುಂಡಿಯನ್ನು ಒಡೆದು ಹುಂಡಿಯಲ್ಲಿ ಭಕ್ತರು ಹಾಕಿದ್ದ ಸುಮಾರು 8 ರಿಂದ 10 ಸಾವಿರ ರೂಪಾಯಿಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆಂದು ತಿಳಿದು ಬಂದಿದೆ.
ಇನ್ನು ಕಳ್ಳತನವಾಗಿರುವ ಒಡವೆಗಳನ್ನು ಐದು ವರ್ಷದ ಹಿಂದೆ ಭಕ್ತಾದಿಗಳು ದೇವರಿಗೆ ನೀಡಿದ್ದರು ಎನ್ನಲಾಗಿದೆ. ಗುರುವಾರ ಬೆಳಗ್ಗೆ ಗ್ರಾಮಸ್ಥರು ದೇವಸ್ಥಾನ ಬಳಿ ಹೋದಾಗ ದೇವಾಲಯದಲ್ಲಿ ಕಳ್ಳತನವಾಗಿರುವ ವಿಚಾರ ತಿಳಿದು ಬಂದಿದೆ. ಈ ಸಂಬಂಧ ಪೆಂಡ್ಲಜೀವಿಯ ಗ್ರಾಮ ಪಂಚಾಯತಿ ಸದಸ್ಯರಾದ ಮೋಹನ್ ರೆಡ್ಡಿ ಪೊಲಿಸರಿಗೆ ದೂರು ನೀಡಿದ್ದಾರೆ.

ತಮ್ಮ ಊರಿನ ಆಂಜನೇಯ ದೇವಸ್ಥಾನದಲ್ಲಿ ಕಳವು ಮಾಡಿದ ಕಳ್ಳರನ್ನು ಹಿಡಿದು ಕಾನೂನು ಕ್ರಮ ಕೈಗೊಂಡು ಕಳವಾಗಿರುವ ದೇವರ ಒಡವೆಗಳನ್ನು ಪತ್ತೆ ಮಾಡಿಕೊಡಬೇಕಾಗಿ ಗ್ರಾಮ ಪಂಚಾಯತಿ ಸದಸ್ಯರಾದ ಮೋಹನ್ ರೆಡ್ಡಿ ತಿರುಮಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.












Click it and Unblock the Notifications