ಕಾನ್‌ಸ್ಟೇಬಲ್ ಅಭ್ಯರ್ಥಿಗಳ ಜೊತೆ ದುರ್ವರ್ತನೆ ಆರೋಪ: ಆರಗ ಪ್ರತಿಕ್ರಿಯೆ
ತುಮಕೂರು, ನವೆಂಬರ್ 1: ಪೊಲೀಸ್ ಕಾನ್ಸ್ಟೇಬಲ್ ಅಭ್ಯರ್ಥಿಗಳು ನೇಮಕಾತಿಗಾಗಿ ಮಾಡುವಂತೆ ಮನವಿ ಸಲ್ಲಿಸಲು ಬಂದಿದ್ದ ವೇಳೆ ಗೃಹಸಚಿವರು ದುರಹಂಕಾರದಿಂದ ನಡೆದುಕೊಂಡಿದ್ದಾರೆಂಬ ಕಾಂಗ್ರೆಸ್ ಆರೋಪಕ್ಕೆ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.
ತುಮಕೂರಿನಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರಗ ಜ್ಞಾನೇಂದ್ರ ಭಾಗವಹಿಸಿದ್ದರು. ಈ ವೇಳೆ ಕೆಲವು ಯುವಕ ಯುವತಿಯರು ಸಚಿವರ ಬಳಿ ತೆರಳಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಕಣ್ಣೀರಿಡುತ್ತಾ ಜ್ಞಾನೇಂದ್ರ ಕಾಲಿಗೆ ಬೀಳುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದ ಕಾಂಗ್ರೆಸ್, " ಪೊಲೀಸ್ ಕಾನ್ಸ್ಟೇಬಲ್ ಅಭ್ಯರ್ಥಿಗಳು ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಬಂದಾಗ ಗೃಹಸಚಿವರ ಉಡಾಫೆ, ದುರಹಂಕಾರದ ನಡವಳಿಕೆ ಇದು, ಆರಗ ಜ್ಞಾನೇಂದ್ರ ಅವರೇ, ಜನರೊಂದಿಗೆ ನಡೆದುಕೊಳ್ಳುವ ರೀತಿ ಇದೇನಾ? ಉದ್ಯೋಗಕ್ಕಾಗಿ ಪರಿತಪಿಸುವ ಯುವಜನರಿಗೆ ನಿಮ್ಮ ಸ್ಪಂದನೆ ಇದೇನಾ?. ಈ ದರ್ಪ, ದೌಲತ್ತುಗಳು ಆಯಸ್ಸು ಕೆಲವೇ ತಿಂಗಳುಗಳಷ್ಟೇ, ನೆನಪಿರಲಿ" ಎಂದು ಆಕ್ರೋಶ ಹೊರ ಹಾಕಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಆರಗ ಜ್ಞಾನೇಂದ್ರ, "ಪೊಲೀಸ್ ಕಾನ್ಸ್ಟೇಬಲ್ ಅಭ್ಯರ್ಥಿಗಳು ನೇಮಕಾತಿ ಮಾಡುವಂತೆ ಪೊಲೀಸ್ ಹುದ್ದೆ ಅಕಾಂಕ್ಷಿಗಳು ನನ್ನ ಬಳಿ ಬಂದಾಗ ಅವರ ಅಹವಾಲುಗಳನ್ನು ಅತ್ಯಂತ ಸಹಾನುಭೂತಿ ಹಾಗೂ ಸಹನೆಯಿಂದ ಕೇಳಿದ್ದೇನೆ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದೇನೆ. ದುರಹಂಕಾರ, ದುಂಡಾವರ್ತನೆ, ದರ್ಪ ಏನಿದ್ದರೂ ಕಾಂಗ್ರೆಸ್‌ನವರ ಸಂಸ್ಕೃತಿ" ಎಂದು ತಿರುಗೇಟು ನೀಡಿದ್ದಾರೆ.
ಇದಕ್ಕು ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರಗ, ಪೊಲೀಸ್ ನೇಮಕಾರಿ ವಯೋಮಿತಿ ಹೆಚ್ಚಳ ಮಾಡಬೇಕೆಂದು ಬಹಳ ದಿನಗಳಿಂದ ಒತ್ತಡವಿದೆ. ಈ ಬಗ್ಗೆ ಕಾನೂನು ತಜ್ಞರ ಜೊತೆಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಇನ್ನು ಹೊಸ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಮುಂದೂಡಲಾಗಿದೆ. ಪೊಲೀಸ್ ಇಲಾಖೆಗೆ ಸಣ್ಣ ವಯಸ್ಸಿನವರ ನೇಮಕಾತಿಯಾಗಬೇಕು, ಇದರಿಂದ ಇಲಾಖೆಯ ಕಾರ್ಯನಿರ್ವಹಣೆಗೆ ಒಳ್ಳೆಯದಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಪೊಲೀಸ್ ಹುದ್ದೆ ಆಕಾಂಕ್ಷಿ ಮೇಲೆ ಹಲ್ಲೆ ಖಂಡಿಸಿದ ಕಾಂಗ್ರೆಸ್
ಪಿಎಸ್‌ಐ ಹಗರಣದ ಸಂತ್ರಸ್ಥರನ್ನು ತಮ್ಮ ಅಳಲನ್ನು ಸಚಿವರ ಮುಂದೆ ಹೇಳಿಕೊಳ್ಳಲು ಬಂದಿದ್ದ ಸಂದರ್ಭದಲ್ಲಿ ತುಮಕೂರು ಡಿವೈಎಸ್‌ಪಿ ಶ್ರೀನಿವಾಸ್ ಹಲ್ಲೆ ನಡೆಸಿರುವ ಘಟನೆಯನ್ನು ಕಾಂಗ್ರೆಸ್ ಖಂಡಿಸಿದ್ದು, ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿದೆ.
" ಪಿಎಸ್‌ಐ ಹಗರಣದಿಂದ ಸಂತ್ರಸ್ತರಾಗಿರುವ ಪ್ರಾಮಾಣಿಕ ಅಭ್ಯರ್ಥಿಗಳನ್ನು ಎದುರುಗೊಳ್ಳಲು ಅವರ ನೋವು ಆಲಿಸಲು ದೈರ್ಯವಿಲ್ಲದೆ ಪೊಲೀಸರನ್ನು ಬಿಟ್ಟು ಹೊಡೆಸುತ್ತೀರಾ ಅರಗ ಜ್ಞಾನೇಂದ್ರರವರೇ, ಅಕ್ರಮ ನಡೆಸಿದ ಸರಕಾರ ಅಪರಾಧಿ ಸ್ಥಾನದಲ್ಲಿದೆ. ಆದರೆ ಶಿಕ್ಷೆ ಮಾತ್ರ ಅಭ್ಯರ್ಥಿಗಳಿಗೆ ಅವರು ಉದ್ಯೋಗವನ್ನೆ ಹೊರತು, ನಿಮ್ಮ ಕುರ್ಚಿಯನ್ನಲ್ಲ" ಎಂದು ಟೀಕಿಸಿದೆ.
ಮತ್ತೊಂದು ಟ್ವೀಟ್‌ನಲ್ಲಿ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಿದ ತುಮಕೂರು ಡಿವೈಎಸ್‌ಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್, ಅಭ್ಯರ್ಥಿಗಳನ್ನು ಭೇಟಿಯಾಗಲು, ಅವರ ನೋವು ಆಲಿಸಲು ಹಿಂದೇಟು ಹಾಕುವುದೇಕೆ? ಅವರ ಸಮಸ್ಯೆಗೆ ಇದುವರೆಗೂ ಪರಿಹಾರ ಸೂಚಿಸದಿರುವುದೇಕೆ? ಯೋಗ್ಯತೆ ಇಲ್ಲದ ಮೇಲೆ ಕುರ್ಚಿಯಿಂದ ಇಳಿಯಿರಿ ಎಂದು ಗೃಹ ಸಚಿವ ಜ್ಞಾನೇಂದ್ರರಿಗೆ ಆಗ್ರಹಿಸಿದೆ.












Click it and Unblock the Notifications