ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ಪತ್ರೆಗಳನ್ನು ಸಾವಿನಕೂಪಗಳನ್ನಾಗಿ ಬದಲಿಸಿದ ಕೀರ್ತಿ ನಿಮ್ಮದು: ಸುಧಾಕರ್‌ಗೆ ಎಚ್‌ಡಿಕೆ ತರಾಟೆ

|
Google Oneindia Kannada News

ತುಮಕೂರು, ನವೆಂಬರ್ 05: ತುಮಕೂರಿನಲ್ಲಿ ಗರ್ಭಿಣಿ ಮಹಿಳೆ ಮತ್ತು ಇಬ್ಬರು ನವಜಾತ ಶಿಶುಗಳ ಸಾವಿನ ಪ್ರಕರಣದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಸರಣಿ ಟ್ವೀಟ್ ಮೂಲಕ ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದಾರೆ.

"ಮಾನ್ಯ ಡಾ. ಕೆ ಸುಧಾಕರ್ ಅವರೇ; ಸಾವು, ಕ್ರೌರ್ಯವನ್ನೇ ಸಂಭ್ರಮಿಸುವ ಸಾವುಗೇಡಿ ಸರ್ಕಾರದ ಆಡಳಿತದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸಾವಿನಕೂಪಗಳನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ನಿಮ್ಮದು. ತುಮಕೂರು ಆಸ್ಪತ್ರೆ ಮತ್ತು ವೈದ್ಯೆಯ ದರ್ಪದಿಂದ ಆದ 3 ಅಮಾನುಷ ಸಾವುಗಳ ಬಗ್ಗೆ ನಿಮಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ? ಎಂದು ಕುಮಾರಸ್ವಾಮಿ ಕೇಳಿದ್ದಾರೆ.

"ಡಾ.ಸುಧಾಕರ್‌ ಅವರೇ; ನಾನು ಎತ್ತಿದ ಪ್ರಶ್ನೆ ಏನು? ನೀವು ಕೊಟ್ಟ ಉತ್ತರವೇನು? ಮನುಷ್ಯತ್ವ ಇದೆಯಾ ನಿಮಗೆ? ನಿಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರೆ; ಆ ಬಾಣಂತಿ, ಆಕೆಯ ಎರಡು ನವಜಾತ ಶಿಶುಗಳ ಧಾರುಣ ಸಾವನ್ನೂ ಸಂಭ್ರಮಿಸುತ್ತಿದ್ದೀರಿ ಎಂದೇ ಅರ್ಥ. ನಿಮ್ಮ ವಿಕೃತ ಮನಃಸ್ಥಿತಿಗೆ ನನ್ನ ಧಿಕ್ಕಾರವಿದೆ," ಎಂದಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾಡಿರುವ ಸರಣಿ ಟ್ವೀಟ್ ಸಂದೇಶದಲ್ಲಿ ಏನೆಲ್ಲ ಇದೆ ಎಂಬುದನ್ನು ನೋಡೋಣ.

ಅಧಿಕಾರದ ಅಮಲು ಇಳಿಯಲು ಆರೇ ತಿಂಗಳಿನಲ್ಲಿ ಇಳಿಯುತ್ತೆ

ಅಧಿಕಾರದ ಅಮಲು ಇಳಿಯಲು ಆರೇ ತಿಂಗಳಿನಲ್ಲಿ ಇಳಿಯುತ್ತೆ

ತುಮಕೂರು ಆಸ್ಪತ್ರೆಯಲ್ಲಿ ನಡೆದದ್ದೇನು? ಆ ವೈದ್ಯೆ ಮತ್ತು ಸಿಬ್ಬಂದಿಯ ನಿರ್ದಯ, ಕ್ರೌರ್ಯದ ವರ್ತನೆ, ಆಕೆಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆಗೆ ಈಗ ಪೊಲೀಸರಿಂದ ಬೆದರಿಕೆ ಹಾಕಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡಬಹುದಾ? ಇನ್ನು ಆರೇ ತಿಂಗಳು, ನಿಮ್ಮ ಅಧಿಕಾರದ ಅಮಲು ಇಳಿಯುತ್ತದೆ," ಎಂದು ಕಿಡಿ ಕಾರಿದ್ದಾರೆ.

ಕರ್ನಾಟಕವು ಕಂಡ ಕರಾಳ ಕ್ರೌರ್ಯದ ಬಗ್ಗೆ ಉಲ್ಲೇಖ

ಕರ್ನಾಟಕವು ಕಂಡ ಕರಾಳ ಕ್ರೌರ್ಯದ ಬಗ್ಗೆ ಉಲ್ಲೇಖ

"ಇಂಥ ಧಾರುಣ ಸಾವುಗಳಾದ ಮೇಲೆಯಾದರೂ ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಬದಲು ಅದನ್ನೇ ಸಮರ್ಥಿಸಿಕೊಳ್ಳುವುದು ಎಂದರೆ ವಿಕಾರವಲ್ಲದೆ ಮತ್ತೇನು? ಜಿಲ್ಲಾಸ್ಪತ್ರೆಯಲ್ಲೇ ಇಂಥ ದುಃಸ್ಥಿತಿ ಇದ್ದರೆ ತಾಲೂಕು, ಅದಕ್ಕೂ ಕೆಳಹಂತದ ಆರೋಗ್ಯ ಕೇಂದ್ರಗಳ ಪಾಡೇನು? ಹೇಳಿ ಸಚಿವರೇ?. ಈ ಆಸ್ಪತ್ರೆಯಿಂದ ನಿರ್ದಯವಾಗಿ ಹೊರಹಾಕಲ್ಪಟ್ಟ ಆ ತಾಯಿ, ನಾಲ್ಕು ಗೋಡೆಗಳ ನಡುವೆ ಇಡೀ ರಾತ್ರಿಯೆಲ್ಲಾ ನರಳಿ ಜೀವ ಚೆಲ್ಲಿದ್ದಾರೆ. ಜನಿಸಿದ ಕ್ಷಣದಲ್ಲೇ ಉಸಿರುಬಿಟ್ಟ ಆ ಎರಡು ಕಂದಮ್ಮಗಳ ಮರಣ ನಿಮ್ಮ ಅಂತಃಕರಣವನ್ನು ಕಲಕಿಲ್ಲವೇ ಸಚಿವರೇ? ಕರ್ನಾಟಕ ಕಂಡ ಅತ್ಯಂತ ಕರಾಳ ಕ್ರೌರ್ಯವಿದು. ಅದನ್ನು ನಾನು ಪ್ರಶ್ನಿಸಿದ್ದೇ ತಪ್ಪಾ?," ಎಂದಿದ್ದಾರೆ.

ಚಾಮರಾಜನಗರ ಆಸ್ಪತ್ರೆ ಆಕ್ಸಿಜನ್ ದುರಂತಕ್ಕೆ ಕಾರಣ

ಚಾಮರಾಜನಗರ ಆಸ್ಪತ್ರೆ ಆಕ್ಸಿಜನ್ ದುರಂತಕ್ಕೆ ಕಾರಣ

ನನ್ನ ಸರ್ಕಾರವಿದ್ದಾಗ ಚಾಮರಾಜನಗರದ ಸುಳವಾಡಿಯ ದೇಗುಲದಲ್ಲಿ ನಡೆದ ವಿಷಪ್ರಸಾದ ಪ್ರಕರಣಕ್ಕೂ ಇದಕ್ಕೂ ಸಂಬಂಧವೇನು? ಆ ಘಟನೆ ನಡೆದಾಗ ನಾನು ಚೆನ್ನೈನಲ್ಲಿ ಅಧಿಕೃತ ಪ್ರವಾಸದಲ್ಲಿದ್ದೆ. ವಿಷಯ ಗೊತ್ತಾದ ಕೂಡಲೇ ಹಿಂದಿರುಗಿ ಸ್ಥಳಕ್ಕೆ ಭೇಟಿ ನೀಡಿದ್ದೆ. ಅದಕ್ಕೂ ಇದಕ್ಕೂ ಸಂಬಂಧವೇನು? ಅಲ್ಲಿ ನಡೆದಿದ್ದು ಷಡ್ಯಂತ್ರ, ಇಲ್ಲಿ ನಡೆದದ್ದು ಕ್ರೌರ್ಯ ಎಂದಿದ್ದಾರೆ.

"ಅದೇ ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಿಂದ 36 ಜನರ ಸಾವಿಗೆ ಕಾರಣರಾಗಿದ್ದು ಯಾರು? ನಿಮ್ಮ ವೈಫಲ್ಯವಲ್ಲವೇ? ರಾಜ್ಯದ ಉದ್ದಗಲಕ್ಕೂ ನಡೆದ ಸಾವುಗಳ ರಣಕೇಕೆ ನಿಮ್ಮ ಕಿವಿಗೆ ಇಂಪಾಗಿತ್ತಾ? ಕೋವಿಡ್ ಹೆಸರಿನಲ್ಲಿ ನಡೆದ ಕೊಳ್ಳೆ ಬಗ್ಗೆ ನನಗಿಂತ ನಿಮ್ಮ ಪಕ್ಷದವರಿಗೇ ಚೆನ್ನಾಗಿ ಗೊತ್ತು," ಎಂದು ಕಿಡಿ ಕಾರಿದ್ದಾರೆ.

ಕಾಸಿಗಾಗಿ ಹುದ್ದೆ ಎನ್ನುವುದೇ ನಿಮ್ಮ ಸುಲಿಗೆ ನೀತಿ

ಕಾಸಿಗಾಗಿ ಹುದ್ದೆ ಎನ್ನುವುದೇ ನಿಮ್ಮ ಸುಲಿಗೆ ನೀತಿ

"ರಾಜ್ಯದಲ್ಲಿ ಕಾಸಿಗಾಗಿ ಹುದ್ದೆ; ಇದು ನಿಮ್ಮ ಸುಲಿಗೆ ನೀತಿ. ವೈದ್ಯರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಬಿಕರಿಗಿಟ್ಟಿದ್ದೀರಿ. ಅವರ ಒಂದು ವರ್ಷದ ವೇತನ ನೀವು ನಿಗದಿ ಮಾಡಿರುವ ದರ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುತ್ತಿದೆ ಎಂದರೆ ಲೋಕಕ್ಕೆ ಕಾಣುವುದಿಲ್ಲವೇ? ಕಳ್ಳಬೆಕ್ಕಿನ ಆಟ ಕಾಲದುದ್ದಕ್ಕೂ ನಡೆಯುವುದಿಲ್ಲ, ನೆನಪಿರಲಿ ಸಚಿವರೇ," ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಗಾಜಿನ ಮನೆಯಲ್ಲಿ ಕುಳಿತು ಗೋಲಿಯಾಟ ಕ್ಷೇಮವಲ್ಲ

ಗಾಜಿನ ಮನೆಯಲ್ಲಿ ಕುಳಿತು ಗೋಲಿಯಾಟ ಕ್ಷೇಮವಲ್ಲ

"ನಿಮ್ಮ ಪರ್ಸಂಟೇಜ್‌ ವ್ಯವಹಾರದ ಬಗ್ಗೆ ಮಾತನಾಡಿದ ಗುತ್ತಿಗೆದಾರರಾದ ಕೆಂಪಣ್ಣ ಅವರು ಚಿಕ್ಕಬಳ್ಳಾಪುರದ ಕಾರ್ಯಕ್ರಮ ಒಂದಕ್ಕೆ ಬರಬೇಕಿತ್ತು. ಅವರನ್ನು ಬರದಂತೆ ತಡೆಯಲು ಏನೆಲ್ಲಾ ಹೈಡ್ರಾಮಾ ನಡೆಸಿದ್ದೀರಿ, ಯಾರ ಕಾಲು ಹಿಡಿದಿರಿ ಎನ್ನುವ ಮಾಹಿತಿ ನನಗೂ ಇದೆ. ʼಗಾಜಿನ ಮನೆಯಲ್ಲಿ ಕೂತು ಗೋಲಿಯಾಟ ಆಡುವುದು ಕ್ಷೇಮವಲ್ಲʼ ಸಚಿವರೇ," ಎಂದು ಹೇಳಿದ್ದಾರೆ.

ಸುಧಾಕರ್ ರಾಜೀನಾಮೆಗೆ ಒತ್ತಾಯಿಸಿದ ಕುಮಾರಸ್ವಾಮಿ

ಸುಧಾಕರ್ ರಾಜೀನಾಮೆಗೆ ಒತ್ತಾಯಿಸಿದ ಕುಮಾರಸ್ವಾಮಿ

ಸಚಿವರೇ, ತುಮಕೂರು ಘಟನೆಗೆ ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ನೀಡಲೇಬೇಕು. ಆ ನೈತಿಕತೆ ನಿಮಗೆ ಇಲ್ಲದಿದ್ದರೆ, ಅದನ್ನು ಕೊನೆಪಕ್ಷ ನಿಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾದರೂ ಪ್ರದರ್ಶಿಸಬೇಕು. ನಿಮ್ಮನ್ನು ಸಂಪುಟದಿಂದ ಕಿತ್ತೊಗೆಯಲೇಬೇಕು. ನಿಮ್ಮ ಪಕ್ಷಕ್ಕೂ ಅಂಥ ನೈತಿಕತೆ ಬಿಜೆಪಿ ಸರಕಾರಕ್ಕೆ ಇದೆಯಾ?," ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

 ತುಮಕೂರಿನಲ್ಲಿ ನಡೆದ ತಾಯಿ-ಮಕ್ಕಳ ಸಾವಿನ ಪ್ರಕರಣ

ತುಮಕೂರಿನಲ್ಲಿ ನಡೆದ ತಾಯಿ-ಮಕ್ಕಳ ಸಾವಿನ ಪ್ರಕರಣ

ತುಮಕೂರಿನಲ್ಲಿ ವಾಸವಾಗಿರುವ ತಮಿಳುನಾಡು ಮೂಲದ 30 ವರ್ಷದ ಮಹಿಳೆ ಕಸ್ತೂರಿ ಎಂಬುವವರಿಗೆ ನವೆಂಬರ್ 2ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿ, ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ವೈದ್ಯರು ಚಿಕಿತ್ಸೆ ನೀಡುವುದಕ್ಕೆ ನಿರಾಕರಿಸಿದ್ದರು. ಇದಲ್ಲದೇ ತುಂಬು ಗರ್ಭಿಣಿಯನ್ನು ವಾಪಸ್ ಕಳುಹಿಸಿದ್ದರು.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದೇ ಕಸ್ತೂರಿ ಅನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದರು. ಆದರೆ ಹಣವಿಲ್ಲದ ಕಾರಣ ಮಹಿಳೆಯು ಮನೆಗೆ ಹಿಂತಿರುಗಿದ್ದರು. ನವೆಂಬರ್ 3ರಂದು ಕಸ್ತೂರಿ ಒಂದು ಮಗುವಿಗೆ ಜನ್ಮ ನೀಡಿದ್ದು, ಎರಡನೇ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಇದೇ ವೇಳೆ ಅವಳಿ ಮಕ್ಕಳು ಸಹ ಸಾವನ್ನಪ್ಪಿದ್ದು, ಈ ತಾಯಿ ಮತ್ತು ಮಕ್ಕಳ ಸಾವಿಗೆ ಜಿಲ್ಲಾಸ್ಪತ್ರೆಯ ಸಿಬ್ಬಂದಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು.

English summary
Ex-CM HD Kumaraswamy Questions Health Minister Dr K Sudhakar in Series Tweet about Woman, twin babies die in Tumakuru hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X