ತುಮಕೂರು : ಜೆಡಿಎಸ್‌ಗೆ ಹಿನ್ನಡೆ, ಪಕ್ಷ ತೊರೆದ ಚಿದಾನಂದ ಗೌಡ
Recommended Video

ತುಮಕೂರು, ಏಪ್ರಿಲ್ 11 : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಿನ್ನಡೆ ಉಂಟಾಗಿದೆ. ಕುಮಾರಸ್ವಾಮಿ ಆಪ್ತರಾದ ಚಿದಾನಂದ ಎಂ.ಗೌಡ ಅವರು ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ.
ಗುರುವಾರ ತುಮಕೂರಿನಲ್ಲಿ ಚಿದಾನಂದ ಎಂ.ಗೌಡ ಅವರು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಿದರು. ಮಾಜಿ ಸಚಿವ ವಿ.ಸೋಮಣ್ಣ, ತುಮಕೂರು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಚಿದಾನಂದ ಗೌಡ ಅವರು ಶಿರಾ ತಾಲೂಕಿನ ಪ್ರಭಾವಿ ಜೆಡಿಎಸ್ ನಾಯಕರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏಳು ದಿನಗಳು ಬಾಕಿ ಇರುವಾಗ ಚಿದಾನಂದ ಅವರು ಪಕ್ಷವನ್ನು ಬಿಟ್ಟು ಬಿಜೆಪಿ ಸೇರಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಚಿದಾನಂದ ಅವರು ಶಿರಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿ.ಸತ್ಯನಾರಾಯಣ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಆಗ ಚಿದಾನಂದ ಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಟ್ರಾಕ್ಟರ್ ಓಡಿಸುವ ರೈತನ ಚಿನ್ನೆ ಪಡೆದು ಚುನಾವಣಾ ಕಣಕ್ಕಿಳಿದಿದ್ದ ಚಿದಾನಂದ ಗೌಡ ಅವರು 3610 ಮತಗಳನ್ನು ಪಡೆದು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಬಿ.ಸತ್ಯನಾರಾಯಣ ಅವರು ಶಿರಾ ಕ್ಷೇತ್ರದಲ್ಲಿ ಜಯಗಳಿಸಿದ್ದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಶಿರಾ ವಿಧಾನಸಭಾ ಕ್ಷೇತ್ರ ಸೇರುತ್ತದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎನ್.ಚಂದ್ರಪ್ಪ ಕಣದಲ್ಲಿದ್ದಾರೆ. ಬಿಜೆಪಿಯಿಂದ ಎ.ನಾರಾಯಣಸ್ವಾಮಿ ಅವರು ಅಭ್ಯರ್ಥಿ.












Click it and Unblock the Notifications