ಜ.22ರಂದು ಶ್ರೀ ಶಿವಕುಮಾರ ಸ್ವಾಮೀಜಿಗಳ ಅಂತ್ಯ ಸಂಸ್ಕಾರ
Recommended Video

ತುಮಕೂರು, ಜನವರಿ 21 : ಯಾವುದೇ ಜಾತಿ, ಧರ್ಮಗಳನ್ನು ಲಕ್ಷಾಂತರ ಭಕ್ತರ, ಸಮಾಜದ ಏಳಿಗೆಗಾಗಿ ಇಡೀ ಜೀವನವನ್ನೇ ತೇಯ್ದ 'ಕ್ರಾಂತಿ ಪುರುಷ', ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಂತ್ಯಸಂಸ್ಕಾರವನ್ನು ಜನವರಿ 22ರಂದು ಸಂಜೆ 4.30ಕ್ಕೆ ಸಿದ್ದಗಂಗಾ ಮಠದ ಆವರಣದಲ್ಲಿಯೇ ನೆರವೇರಿಸಲು ನಿಶ್ಚಯಿಸಲಾಗಿದೆ.
ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ತ್ವದ ಕೈಂಕರ್ಯದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಶತಾಯುಷಿ, 111 ವರ್ಷದ ಶ್ರೀ ಶಿವಕುಮಾರ ಸ್ವಾಮೀಜಿಗಳು, ಹುಣ್ಣಿಮೆಯ ದಿನ ಜನವರಿ 21ರಂದು ಬೆಳಿಗ್ಗೆ 11.44ಕ್ಕೆ ಶಿವಸಾಯುಜ್ಯ ಹೊಂದಿದರು. ಕೋಟ್ಯಂತರ ಭಕ್ತರನ್ನು ಅಗಲಿ ಶಿವನೆಡೆಗೆ ನಡೆದಿದ್ದಾರೆ.
ಈಗಾಗಗೆ ತುಮಕೂರಿನಲ್ಲಿರುವ ಶಿವಗಂಗಾ ಮಠಕ್ಕೆ ಎಲ್ಲೆಡೆಯಿಂದ ಭಕ್ತಾದಿಗಳು ಧಾವಿಸುತ್ತಿದ್ದಾರೆ. ರಾಜಕಾರಣಿಗಳು ತಮ್ಮೆಲ್ಲ ರಾಜಕಾರಣವನ್ನು ಮರೆತು ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಲು ತುಮಕೂರಿಗೆ ಬರುತ್ತಿದ್ದಾರೆ. ಇನ್ನು ಸಿದ್ದಗಂಗಾ ಮಠದಲ್ಲಿ ಕಲಿಯುತ್ತಿರುವ ಮತ್ತು ಕಲಿತಿರುವ ವಿದ್ಯಾರ್ಥಿಗಳ ದುಃಖವಂತೂ ಮುಗಿಲುಮುಟ್ಟಿದೆ. ಮಕ್ಕಳು ಅನಾಥ ಭಾವದಿಂದ ಕಂಬನಿ ಮಿಡಿಯುತ್ತಿದ್ದಾರೆ.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಎಂಬಿ ಪಾಟೀಲ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಮಧ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಕೆಜೆ ಜಾರ್ಜ್, ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರು ಮಠದಲ್ಲಿಯೇ ಇದ್ದಾರೆ. ಅವರೊಂದಿಗೆ ಸುತ್ತೂರು ಶ್ರೀಗಳು ಮತ್ತಿತರ ಮಠಾಧಿಪತಿಗಳು ಕೂಡ ಅಂತಿಮ ಸಂಸ್ಕಾರದ ವಿಧಿವಿಧಾನದ ಬಗ್ಗೆ ಚರ್ಚಿಸುತ್ತಿದ್ದಾರೆ.
ಅಂತಿಮ ನಮನ ಸಲ್ಲಿಸಲಿದ್ದಾರೆ ಮೋದಿ : ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಜಿಗಳಿಗೆ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಭಕ್ತರಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದುಕೊಂಡು ರಾಷ್ಟ್ರದ ನಾಯಕರನೇಕರು ಹಲವಾರು ಸಂದರ್ಭದಲ್ಲಿ ಬಂದು ಭೇಟಿ ಮಾಡಿ, ಶ್ರೀಗಳಿಂದ ಸಲಹೆ ಪಡೆಯುತ್ತಿದ್ದರು. ಈಗ ಶ್ರೀಗಳ ಅಂತಿಮ ಸಂಸ್ಕಾರಕ್ಕೆ ರಾಷ್ಟ್ರಪತಿ ಮತ್ತು ಪ್ರಧಾನಿಗಳು ಕೂಡ ಬರಲಿದ್ದಾರೆ.
ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ : ಶ್ರೀಗಳ ಅಂತ್ಯ ಸಂಸ್ಕಾರ ಮಂಗಳವಾರ ಸಂಜೆ 4.30ಕ್ಕೆ ಸಿದ್ದಗಂಗಾ ಮಠದ ಆವರಣದಲ್ಲಿಯೇ ನಡೆಯಲಿದ್ದು, ಅಂತಿಮ ದರ್ಶನಕ್ಕಾಗಿ ಈಗಾಗಲೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತಾದಿಗಳು ಶಾಂತ ರೀತಿಯಿಂದ ಅಂತಿಮ ದರ್ಶನ ಪಡೆಯಲು ಬ್ಯಾರಿಕೇಡ್ ಗಳನ್ನು ಕೂಡ ನಿರ್ಮಿಸಲಾಗಿದೆ. ಸದ್ಯಕ್ಕೆ ಮಠದೊಳಗೆ ವಿಐಪಿ ಮತ್ತು ವಿವಿಐಪಿಗಳನ್ನು ಮಾತ್ರ ಬಿಡಲಾಗುತ್ತಿದೆ.












Click it and Unblock the Notifications