ಶಿವಕುಮಾರ ಸ್ವಾಮೀಜಿ ಜನ್ಮದಿನಕ್ಕೆ ತುಮಕೂರು ಜಿಲ್ಲೆಯಲ್ಲೇ ಹಬ್ಬ
ತುಮಕೂರು, ಏಪ್ರಿಲ್ 1 : ತ್ರಿವಿಧ ದಾಸೋಹಿ, ಮಹಾ ಮಾನವತಾವಾದಿ, ಕಾಯಕ ಯೋಗಿ, ನಡೆದಾಡುವ ದೇವರೆಂದೇ ಖ್ಯಾತಿ ಪಡೆದ ಸಿದ್ದಗಂಗಾ ಮಠಾಧ್ಯಕ್ಷರಾದ ಶಿವಕುಮಾರ ಮಹಾ ಸ್ವಾಮೀಜಿ ನೂರಾ ಹತ್ತು ಸಾರ್ಥಕ ವಸಂತ ಪೂರೈಸಿ, ನೂರಾ ಹನ್ನೊಂದನೇ ವಸಂತಕ್ಕೆ ಪದಾರ್ಪಣೆ ಮಾಡಿದರು.
ಶ್ರೀಗಳ ಜನ್ಮದಿನದ ಹಿನ್ನೆಲೆಯಲ್ಲಿ ಮಠದಲ್ಲಿ ಹಾಗೂ ತುಮಕೂರು ನಗರದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ತುಮಕೂರು ನಗರದಲ್ಲಿಯೂ ಭಕ್ತರು ಪಾನಕ- ಮಜ್ಜಿಗೆ ವಿತರಿಸಿ, ಶ್ರೀಗಳ ಜನ್ಮದಿನಕ್ಕೆ ಶುಭಾಶಯ ಕೋರಿ, ಧನ್ಯತೆ ಮೆರೆದರು. ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಜನ ಮಠಕ್ಕೆ ಧಾವಿಸಿ, ಶಿವಕುಮಾರ ಸ್ವಾಮೀಜಿ ದರ್ಶನ- ಆಶೀರ್ವಾದ ಪಡೆದರು
ಬೆಳಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಸುತ್ತೂರುಸ್ವಾಮೀಜಿ, ಆದಿಚುಂಚನಗಿರಿ ಸ್ವಾಮೀಜಿ, ಮುರುಘಾ ಮಠದ ಸ್ವಾಮೀಜಿ, ಬೇಲಿಮಠದ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿ ಭಾಗಿಯಾಗಿ ಸಿದ್ದಗಂಗಾ ಶ್ರೀಗಳ ಸಾಧನೆ ಸ್ಮರಿಸಿದರು

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ಮುಖಂಡರಾದ ಆರ್.ಅಶೋಕ್, ಸಿಟಿ ರವಿ, ಸೊಗಡು ಶಿವಣ್ಣ, ಜಿ.ಎಸ್.ಬಸವರಾಜು, ಜ್ಯೋತಿಗಣೇಶ್, ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇತರೆ ಗಣ್ಯರು ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿ ಜನ್ಮದಿನಕ್ಕೆ ಶುಭಾಶಯ ಕೋರಿದರು

ಶ್ರೀಗಳ ಜನ್ಮದಿನೋತ್ಸವಕ್ಕೆ ಭಾಗವಹಿಸುವ ಭಕ್ತರಿಗಾಗಿ ಮಠದ ಆಡಳಿತ ಮಂಡಳಿ ವಿಶೇಷ ಪ್ರಸಾದ ವ್ಯವಸ್ಥೆ ಮಾಡಿತ್ತು. ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು , ಕೇಸರಿ ಬಾತು. ಮಧ್ಯಾಹ್ನದ ಭೋಜನಕ್ಕೆ ಚಿತ್ರಾನ್ನ, ಕೋಸಂಬರಿ, ಅನ್ನ -ಸಾರು, ಪಲ್ಯಗಳು, ಪಾಯಸ, ಸಿಹಿ ಮತ್ತು ಖಾರ ಬೂಂದಿ ವ್ಯವಸ್ಥೆ ಮಾಡಲಾಗಿತ್ತು.

ಭಕ್ತಾದಿಗಳಿಗೆ ಸಿಹಿ ಹಂಚಲು 250 ಕ್ವಿಂಟಲ್ ಸಿಹಿ ಬೂಂದಿ ಹಾಗೂ 30 ಕ್ವಿಂಟಲ್ ಖಾರ ಬೂಂದಿ ತಯಾರಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವಹಿಸಿತ್ತು.












Click it and Unblock the Notifications