Copra Price: ತಿಪಟೂರು ಎಪಿಎಂಸಿಯಲ್ಲಿ 28,000 ರೂಪಾಯಿ ದಾಟಿದ ಕ್ವಿಂಟಾಲ್ ಕೊಬ್ಬರಿ ಧಾರಣೆ
Tiptur Copra Price: ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ಪ್ರಸಿದ್ಧ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯು ಏರಿಕೆಯಾಗುದೆ. ಇದರಿಂದ ತೆಂಗು ಬೆಳೆಗಾರರ ಮೊಗದಲ್ಲಿ ಮಾಯವಾಗಿದ್ದ ಸಂತಸ ಮತ್ತೆ ಬಂದಂತಾಗಿದೆ. ಹಾಗಾದ್ರೆ ಪ್ರಸ್ತುತ ಕ್ವಿಂಟಾಲ್ ಧಾರಣೆ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ತಿಪಟೂರು ಎಪಿಎಂಸಿ ಮಾರುಕಟ್ಟಯಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕ್ವಿಂಟಾಲ್ ಕೊಬ್ಬರಿ ಧಾರಣೆ 27,000 ರೂಪಾಯಿ ಆಸುಪಾಸಿಗೆ ಇಳಿಕೆಯಾಗಿತ್ತು. ಆದರೆ ಇದೀಗ ಇಂದು (ಅಕ್ಟೋಬರ್ 08) ದಿಢೀರ್ ಏರಿಕೆಯಾಗಿದೆ. 100 ಕೆ.ಜಿಗೆ ಗರಿಷ್ಠ ಬೆಲೆ ₹28,825 ತಲುಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಲೆ ಏರಿಕೆಗೆ ಪ್ರಮುಖ ಕಾರಣ ಏನು?
ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಉತ್ತಮ ದರ್ಜೆಯ ತಿಪಟೂರು ಕೊಬ್ಬರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ಕೆಲವು ಸಮಯದಿಂದ ಆವಕದಲ್ಲಿ ಕೊರತೆ ಕಂಡುಬಂದಿದ್ದರೂ, ಗುಣಮಟ್ಟದ ಕೊಬ್ಬರಿಯ ಪೂರೈಕೆ ಕಡಿಮೆ ಇರುವುದು ಮತ್ತು ಎಣ್ಣೆ ಉತ್ಪಾದಕರು ಹಾಗೂ ವರ್ತಕರಿಂದ ಹೆಚ್ಚಿನ ಸ್ಪರ್ಧಾತ್ಮಕ ಟೆಂಡರ್ ಸಲ್ಲಿಕೆ ಆಗುತ್ತಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಬೆಳಗಾರರ ಮುಖದಲ್ಲಿ ಸಂತಸ
ಕಳೆದ ಕೆಲವು ದಿನಗಳಿಂದ ತೆಂಗು ಬೆಳೆಗಾರರು ಎದುರಿಸಿದ್ದ ನಷ್ಟ ಹಾಗೂ ಮಾರುಕಟ್ಟೆಯ ಏರಿಳಿತಗಳಿಗೆ ಪ್ರಸ್ತುತ ಸಿಗುತ್ತಿರುವ ಈ ಗರಿಷ್ಠ ದರವು ದೊಡ್ಡ ಮಟ್ಟದ ಭರವಸೆ ನೀಡಿದೆ. ₹28,000ರ ಗಡಿ ದಾಟಿ ಮುನ್ನುಗ್ಗುತ್ತಿರುವ ಬೆಲೆಯಿಂದಾಗಿ ಕಲ್ಪತರು ನಾಡಿನ ರೈತರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಮಾಹಿತಿ ಪ್ರಕಾರ, ಮುಂಬರುವ ಹಬ್ಬದ ಸೀಸನ್‌ನಲ್ಲಿ ಮತ್ತಷ್ಟು ಏರಿಕೆ ಕಂಡುಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ತಿಪಟೂರು ಕೊಬ್ಬರಿಯ ವಿಶೇಷತೆ ಏನು?
ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಹಬ್ಬ-ಹರಿದಿನಗಳು ಹತ್ತಿರ ಆಗುತ್ತಿರುವುದರಿಂದ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ತಿಪಟೂರು ಕೊಬ್ಬರಿ ತನ್ನ ವಿಶಿಷ್ಟ ರುಚಿ, ಹೆಚ್ಚಿನ ಎಣ್ಣೆಯಂಶಕ್ಕೆ ಹೆಸರುವಾಸಿಯಾಗಿದೆ. ಇನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ, ಇಲ್ಲಿನ ಮಾರುಕಟ್ಟೆಯಲ್ಲಿ ರೈತರಿಗೆ ಸೂಕ್ತ ಬೆಲೆ ಸಿಗುತ್ತಿದೆ. ಇದರಿಂದ ಇಲ್ಲಿನ ಕೊಬ್ಬರಿ ಬೆಳೆಗಾರರಲ್ಲಿ ವಿಶ್ವಾಸವನ್ನು ಹೆಚ್ಚಿದೆ. ಬರುವ ದಿನಗಳಲ್ಲಿ ಬೆಲೆ ಮತ್ತೆ ಹೆಚ್ಚಳ ಆಗುವ ನಿರೀಕ್ಷೆಯಲ್ಲಿದ್ದಾರೆ.
ತಿಪಟೂರು ಕೊಬ್ಬರಿಗೆ ಭಾರಿ ಬೇಡಿಕೆ ಏಕೆ?
* ಸ್ಥಳೀಯ ಮಾರುಕಟ್ಟೆಗಳ ಜೊತೆಗೆ ಹೊರರಾಜ್ಯಗಳಲ್ಲಿಯೂ (ವಿಶೇಷವಾಗಿ ಉತ್ತರ ಭಾರತದಲ್ಲಿ) ತಿಪಟೂರು ಉಂಡೆ ಕೊಬ್ಬರಿಗೆ ಭಾರಿ ಬೇಡಿಕೆ ಇದೆ
* ಹಬ್ಬಗಳು ಮತ್ತು ಶುಭ ಸಮಾರಂಭಗಳ ಸಮೀಪಿಸುತ್ತಿರುವ ಹಿನ್ನೆಲೆ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
* ರೈತರು ಮತ್ತು ವ್ಯಾಪಾರಸ್ಥರ ಬಳಿ ಇದ್ದ ಹಳೆಯ ಕೊಬ್ಬರಿಯ ದಾಸ್ತಾನುಗಳು ಬಹುತೇಕ ಖಾಲಿಯಾಗಿವೆ.
* ಹೊಸ ಕೊಬ್ಬರಿ ಮಾರುಕಟ್ಟೆಗೆ ಬರಲು ಸಮಯ ಹಿಡಿಯುತ್ತಿದೆ.
* ತಿಪಟೂರು ಕೊಬ್ಬರಿ ತನ್ನ ವಿಶೇಷ ರುಚಿ ಮತ್ತು ಬಾಳಿಕೆಗೆ ಹೆಸರುವಾಸಿ.
* ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ 'ಗ್ರೇಡ್-1' ಕೊಬ್ಬರಿಯ ಕೊರತೆ ಇರುವುದರಿಂದ, ಸಿಗುತ್ತಿರುವ ಗುಣಮಟ್ಟದ ಈ ಕೊಬ್ಬರಿಗೆ ವ್ಯಾಪಾರಸ್ಥರು ಪೈಪೋಟಿಯ ಮೇಲೆ ಹೆಚ್ಚಿನ ದರ ನೀಡಿ ಖರೀದಿಸುತ್ತಿದ್ದಾರೆ.
* ಇಲ್ಲಿನ ತೆಂಗಿನ ಎಣ್ಣೆ ಮತ್ತು ಇತರ ಉಪ ಉತ್ಪನ್ನಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿದೆ.


Click it and Unblock the Notifications
