Copra Price: ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ದಾಖಲೆ ಬೆಲೆಗೆ ಮಾರಾಟವಾಗಲು ಕಾರಣ ಏನು?
Copra Price: ಕಲ್ಪತರು ನಾಡು ಅಂತಲೇ ಪ್ರಸಿದ್ಧಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿಯ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ (ಕ್ವಿಂಟಲ್‌ಗೆ 38,018 ರೂಪಾಯಿ) ಏರಿಕೆಯಾಗಿದೆ. ಶೀಘ್ರದಲ್ಲೇ 40,000 ಗಡಿ ದಾಟುವ ಸಾಧ್ಯತೆಯಿದೆ. ಈ ಬೆಲೆ ಏರಿಕೆ ಮತ್ತು ಹೆಚ್ಚಿನ ಬೇಡಿಕೆಗೆ ಪ್ರಮುಖ ಕಾರಣಗಳು ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯಲ್ಲಿ ಈ ದಿಢೀರ್ ಏರಿಕೆಯು ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಪ್ರಸ್ತುತ ಮಾರುಕಟ್ಟೆಗೆ ಕೊಬ್ಬರಿಯ ಪೂರೈಕೆ ಗಣನೀಯವಾಗಿ ಕುಸಿದಿರುವುದು ಮತ್ತು ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ತಿಪಟೂರು ಉಂಡೆ ಕೊಬ್ಬರಿಗೆ ಇರುವ ಅತಿ ಹೆಚ್ಚಿನ ಬೇಡಿಕೆಯು ಈ ದಾಖಲೆ ಬೆಲೆಗೆ ಪ್ರಮುಖ ಕಾರಣವಾಗಿದೆ.

40,000 ರೂ. ಗಡಿ ದಾಟುವುದು ಸಾಧ್ಯತೆ
ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲು ವರ್ತಕರು ಮುಗಿಬೀಳುತ್ತಿದ್ದು, ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಮುಂದಿನ ದಿನಗಳಲ್ಲಿ ಪೂರೈಕೆ ಮತ್ತಷ್ಟು ಕ್ಷೀಣಿಸಿದರೆ ಕ್ವಿಂಟಾಲ್ ಧಾರಣೆ 40,000 ರೂಪಾಯಿಗಳ ಗಡಿ ದಾಟುವುದು ಸಾಧ್ಯತೆ ಹೆಚ್ಚಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಬೆಲೆ ಏರಿಕೆಗೆ ಪ್ರಮುಖ ಕಾರಣಗಳು
* ತಿಪಟೂರು ಕೊಬ್ಬರಿಯು ತನ್ನ ವಿಶಿಷ್ಟ ರುಚಿ, ಗಾತ್ರ ಮತ್ತು ಬಣ್ಣಕ್ಕೆ ದೇಶಾದ್ಯಂತ ಪ್ರಸಿದ್ಧಿಯಾಗಿದೆ. ಪ್ರಸ್ತುತ ಉತ್ತರ ಭಾರತದ ರಾಜ್ಯಗಳಿಂದ ತಿಪಟೂರು ಕೊಬ್ಬರಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ.
* ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿಯ ಪ್ರಮಾಣ ತುಂಬಾ ಕಡಿಮೆಯಿದೆ. ಈ ಸೀಸನ್‌ನಲ್ಲಿ ಸುಮಾರು 1,700 ಕ್ವಿಂಟಲ್‌ನಷ್ಟು ಮಾತ್ರ ಆವಕವಾಗಿದ್ದು, ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
* ಕೇವಲ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು ಮತ್ತು ಕೇರಳದ ವ್ಯಾಪಾರಿಗಳು ಕೂಡ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರು ಕೊಂಡುಕೊಳ್ಳಲು ಮುಗಿಬೀಳುತ್ತಿದ್ದಾರೆ. ಹೀಗೆ ಇಲ್ಲಿನ ಕೊಬ್ಬರಿಗಾಗಿ ವ್ಯಾಪಾರಿಗಳ ನಡುವೆ ಪೈಪೋಟಿ ಏರ್ಪಟ್ಟಿರುವುದು ದರ ಹೆಚ್ಚಳಕ್ಕೆ ಪುಷ್ಟಿ ನೀಡಿದಂತಾಗಿದೆ.
* ತಿಪಟೂರು ಪ್ರದೇಶದ ತೆಂಗಿನಕಾಯಿಯಲ್ಲಿ ತೈಲದ ಅಂಶ ಹೆಚ್ಚಿರುತ್ತದೆ ಮತ್ತು ಅದು ದೀರ್ಘಕಾಲ ಬಾಳಿಕೆ ಬರುತ್ತದೆ. ಈ ನೈಸರ್ಗಿಕ ಗುಣಮಟ್ಟವು ಬೇರೆಡೆಯ ಕೊಬ್ಬರಿಗಿಂತ ಇದಕ್ಕೆ ಹೆಚ್ಚಿನ ಮೌಲ್ಯವನ್ನು ತಂದುಕೊಟ್ಟಿದೆ.
* ಕೆಲವರು ಬಳಿ ಮಾತ್ರ ದಾಸ್ತಾನು ಇರುವುದರಿಂದ, ಬೇಡಿಕೆಗೆ ತಕ್ಕಷ್ಟು ಕೊಬ್ಬರಿ ಸಿಗದೆ ಬೆಲೆ ಗಗನಕ್ಕೇರುತ್ತಿದೆ.
* ಅಲ್ಲದೆ, ಇದೀಗ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ತೆಂಗು ಬೆಳೆಗಾರರು ಕೊಬ್ಬರಿ ಆಗುವವರೆಗೂ ಬಿಡುವುದಿಲ್ಲ. ಬದಲಾಗಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೆ ಎಳನೀರು ಇರುವಾಗಲೇ ವರ್ತಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದು ಕೂಡ ಕೊಬ್ಬರಿ ಬೆಲೆ ಏರಿಕೆಗೆ ಕಾರಣವಾಗಿದೆ.
ಮಾರುಕಟ್ಟೆಯಲ್ಲಿ ಪ್ರಸ್ತುತ ಇರುವ ದರವನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಕೊಬ್ಬರಿ ದರವು 40,000 ರೂಪಾಯಿಯ ಮೈಲಿಗಲ್ಲನ್ನು ತಲುಪುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಮತ್ತು ವರ್ತಕರು ಹೇಳುತ್ತಿದ್ದಾರೆ. ಇದು ತೆಂಗು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.
ಗಗನಕ್ಕೇರಿದ ಎಳನೀರಿನ ಬೆಲೆ
ಮತ್ತೊಂದೆಡ ಬೇಸಿಗೆಯ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಎಳನೀರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಪರಿಣಾಮ ದರವು ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಈ ಬಾರಿ ತೆಂಗಿನ ಇಳುವರಿ ಕುಸಿದಿರುವುದು ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ನಗರ ಪ್ರದೇಶಗಳಲ್ಲಿ ಒಂದು ಎಳನೀರಿನ ಬೆಲೆ 60 ರಿಂದ 80 ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಆರೋಗ್ಯದ ದೃಷ್ಟಿಯಿಂದ ಜನರು ತಂಪು ಪಾನೀಯಗಳಿಗಿಂತ ಎಳನೀರನ್ನೇ ಹೆಚ್ಚು ಅವಲಂಬಿಸಿರುವುದರಿಂದ ದರ ಏರಿಕೆಗೆ ಮುಖ್ಯ ಕಾರಣವಾಗಿದೆ.












Click it and Unblock the Notifications