ರೈಲಿನಿಂದ ಬಿದ್ದು ಬಿಬಿಎಂಪಿ ಜಂಟಿ ಆಯುಕ್ತರ ಸಾವು
ತುಮಕೂರು, ಡಿ.13 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವವಲಯದ ಜಂಟಿ ಆಯುಕ್ತರು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ತುಮಕೂರಿನ ಹೆಗಡೆ ಕಾಲೋನಿ ಬಳಿ ಘಟನೆ ನಡೆದಿದ್ದು, ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.
ಮೃತಪಟ್ಟವರನ್ನು ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ಬಿ.ಇ. ಗೋವಿಂದರಾಜು (56) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ತೆರಳುತ್ತಿದ್ದಾಗ ಶುಕ್ರವಾರ ರಾತ್ರಿ ಆಯತಪ್ಪಿ ರೈಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. [ಮೈಸೂರು ರೈಲ್ವೆ ನಿಲ್ದಾಣದಲ್ಲಿ ದಂಡ ಪ್ರಯೋಗ]

ಶನಿವಾರ ಬೆಳಗ್ಗೆ ಸ್ಥಳೀಯರು ರೈಲ್ವೆ ಹಳಿ ಬಳಿ ಶವ ಬಿದ್ದಿರುವುದನ್ನು ಕಂಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ಅಪರಿಚಿತ ವ್ಯಕ್ತಿಯ ಶವ ಎಂದು ಪ್ರಕರಣ ದಾಖಲಿಸಿಕೊಂಡು, ಶವವನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದರು. [ಕಸದ ಮಾರುಕಟ್ಟೆ : ಕಸ ಕೊಡಿ, ಹಣ ಪಡಿ]
ನಂತರ ಮೃತದೇಹದಲ್ಲಿದ್ದ ಗುರುತಿನ ಚೀಟಿಗಳಿಂದ ಗೋವಿಂದರಾಜು ಅವರ ವಿಳಾಸ ಪತ್ತೆಯಾಗಿದೆ. ಗೋವಿಂದರಾಜು ಅವರು ಬಿಬಿಎಂಪಿಯಲ್ಲಿ ಆರೋಗ್ಯ ಜಾಹೀರಾತು ಹಾಗೂ ಕೌನ್ಸಿಲ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಪೂರ್ವ ವಲಯದ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೇಯರ್ ಸಂತಾಪ : ಬಿ.ಇ.ಗೋವಿಂದರಾಜು ಅವರ ನಿಧನಕ್ಕೆ ಮೇಯರ್ ಶಾಂತಕುಮಾರಿ, ಉಪ ಮೇಯರ್ ಕೆ.ರಂಗಣ್ಣ , ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್, ಪ್ರತಿಪಕ್ಷದ ನಾಯಕರಾದ ಮಂಜುನಾಥ ರೆಡ್ಡಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications