ಶಬರಿಮಲೆ ಯಾತ್ರಿಕರಿಗೆ ಬಾಟಲಿಗಳಲ್ಲಿ ಔಷಧಯುಕ್ತ ಕುಡಿಯುವ ನೀರು
ತಿರುವನಂತಪುರಂ, ನವೆಂಬರ್ 25: ಕೊರೊನಾ ವೈರಸ್ ಭೀತಿಯ ನಡುವೆಯೂ ಪವಿತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ಯಾತ್ರೆ ಮಾಡುತ್ತಿರುವ ಭಕ್ತರಿಗೆ ಖುಷಿಯ ಸುದ್ದಿಯೊಂದು ಸಿಕ್ಕಿದೆ. ಯಾತ್ರೆ ತೆರಳುವ ವೇಳೆ ಭಕ್ತರಿಗೆ ಔಷಧಯುಕ್ತ ಕುಡಿಯುವ ನೀರು ಈ ಬಾರಿ ಬಾಟಲಿಗಳಲ್ಲಿ ಕೂಡ ಸಿಗಲಿದೆ.
ಸೋಂಕು ಹರಡುವ ಅಪಾಯವನ್ನು ತಗ್ಗಿಸಲು ದೇವಸ್ಥಾನದ ವ್ಯವಹಾರಗಳನ್ನು ನಿಭಾಯಿಸುವ ಟ್ರಾವಂಕೋರ್ ದೇವಸ್ವಂ ಮಂಡಳಿ (ಟಿಡಿಬಿ) ವಿಶೇಷವಾಗಿ ಸಿದ್ಧಪಡಿಸಲಾದ ಔಷಧೀಯ ಕುಡಿಯುವ ನೀರನ್ನು ಪ್ರತ್ಯೇಕ ಸ್ಟೀಲ್ ಬಾಟಲಿಗಳಲ್ಲಿ ಭಕ್ತರಿಗೆ ವಿತರಿಸುವ ಹೊಸ ವ್ಯವಸ್ಥೆಯನ್ನು ಆರಂಭಿಸಿದೆ.
ಯಾತ್ರೆಗೆ ತೆರಳುವ ಭಕ್ತರು 200 ರೂ ಠೇವಣಿ ಪಾವತಿಸಿದರೆ ಅವರು ಯಾತ್ರೆ ಆರಂಭದ ಮೂಲ ನೆಲೆಯಾದ ಪಂಬಾದ ಆಂಜನೇಯ ಸಭಾಂಗಣದಲ್ಲಿ ಔಷಧೀಯ ಕುಡಿಯುವ ನೀರನ್ನು ಸ್ಟೀಲ್ ಬಾಟಲಿಯಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ದರ್ಶನದ ಬಳಿಕ ಸ್ಟೀಲ್ ಬಾಟಲಿಯನ್ನು ಕೌಂಟರ್‌ಗೆ ಮರಳಿಸಿದರೆ ಅವರಿಗೆ ಠೇವಣಿ ಇರಿಸಿದ ಹಣವನ್ನು ಮರಳಿ ನೀಡಲಾಗುತ್ತದೆ. ಇದಲ್ಲದೆ ಯಾತ್ರೆಯ ಮಾರ್ಗಗಳಾದ ಪಂಬಾ, ಚರಲ್ಮೇಡು, ಜ್ಯೋತಿನಗರ ಮತ್ತು ಮಲಿಕಾಪುರಂಗಳಲ್ಲಿ ಕೂಡ ವಿವಿಧ ಸ್ಥಳಗಳಲ್ಲಿ ಬಳಸಿ ಎಸೆಯುವಂತಹ ಪೇಪರ್ ಕಪ್‌ಗಳಲ್ಲಿ ಕೂಡ ನೀರು ನೀಡಲಾಗುತ್ತದೆ.
ಪ್ರತಿ ಬಾರಿ ಯಾತ್ರಾ ಅವಧಿಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಔಷಧಯುಕ್ತ ಕುಡಿಯುವ ನೀರನ್ನು ವಿತರಿಸಲಾಗುತ್ತದೆ. ಒಣ ಶುಂಠಿ, ಲಾವಂಚ ಮತ್ತು ಚಕ್ಕೆಗಳಂತಹ ಔಷಧೀಯ ಸಸ್ಯಗಳನ್ನು ಕುದಿಸಿ ಈ ನೀಡು ತಯಾರಿಸಲಾಗುತ್ತದೆ.












Click it and Unblock the Notifications