ಅಪಘಾತದಲ್ಲಿ ಸಂಗೀತಗಾರ ಬಾಲಭಾಸ್ಕರ್ ಅವರ ಮಗು ಸಾವು
ತಿರುವನಂತಪುರಂ, ಸೆಪ್ಟೆಂಬರ್ 25: ಗಾಯಕ, ಪಿಟೀಲುವಾದಕ ಬಾಲಭಾಸ್ಕರ್ ಅವರ ಕುಟುಂಬ ಅಪಘಾತಕ್ಕೀಡಾಗಿದೆ. ಮಂಗಳವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿಯ ಮಗು ಮೃತಪಟ್ಟಿದೆ.
ತಿರುವನಂತಪುರಂ ಹೆದ್ದಾರಿಯ ಪಕ್ಕದಲ್ಲಿದ್ದ ಮರವೊಂದಕ್ಕೆ ಬಾಲಭಾಸ್ಕರ್ ಅವರ ಕುಟುಂಬವಿದ್ದ ಕಾರು ಅಪ್ಪಳಿಸಿದೆ. ಈ ದುರ್ಘಟನೆಯಲ್ಲಿ ಬಾಲಭಾಸ್ಕರ್, ಬಾಲಭಾಸ್ಕರ್ ಅವರ ಪತ್ನಿ ಲಕ್ಷ್ಮಿ, ಕಾರು ಚಾಲಕ ಅರ್ಜುನ್ ಅವರಿಗೆ ತೀವ್ರ ಗಾಯಗಳಾಗಿವೆ. ದಂಪತಿಯ ಎರಡು ವರ್ಷ ವಯಸ್ಸಿನ ಮಗು ತೇಜಸ್ವಿನಿ ಮೃತಪಟ್ಟಿದ್ದಾಳೆ.
ಬಾಲಭಾಸ್ಕರ್ ಅವರು ಸದ್ಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ ಎಂಬ ವರದಿಗಳು ಬಂದಿವೆ.

ಲಭ್ಯ ಮಾಹಿತಿ ಪ್ರಕಾರ, ಬಾಲಭಾಸ್ಕರ್ ಅವರು ತ್ರಿಸ್ಸೂರ್ ದೇಗುಲಕ್ಕೆ ಭೇಟಿ ನೀಡಿ, ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ. ಮುಂಜಾನೆ ನಿದ್ರೆ ರಹಿತ ಪಯಣದಿಂದ ಚಾಲಕನ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಮಂಗಳಾಪುರಂ ಪೊಲೀಸರು ಹೇಳಿದ್ದಾರೆ.
12 ವರ್ಷ ವಯಸ್ಸಿನಿಂದಲೇ ಸಂಗೀತ ಕ್ಷೇತ್ರದಲ್ಲಿ ಮಿಂಚಿದ್ದ ಬಾಲ ಭಾಸ್ಕರ್ ಅವರು, ಮಾಂಗಲ್ಯ ಪಲ್ಲಕ್ಕು ಎಂಬ ಮಲಯಾಳಂ ಸಿನಿಮಾಕ್ಕೆ ತಮ್ಮ 17ನೇ ವಯಸ್ಸಿನಲ್ಲೆ ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು.












Click it and Unblock the Notifications