ಚುನಾವಣೆಗೆ ಮುನ್ನವೇ ಬಿಜೆಪಿಗೆ ಶಾಕ್: ಅಭ್ಯರ್ಥಿ ಜೈಲುಪಾಲು
ತಿರುವನಂತಪುರಂ, ಮಾರ್ಚ್ 29: ಲೋಕಸಭೆ ಚುನಾವಣೆಗೆ ಮುನ್ನವೇ ಕೇರಳದಲ್ಲಿ ಬಿಜೆಪಿಗೆ ಭಾರಿ ಆಘಾತ ಎದುರಾಗಿದೆ. ಪಕ್ಷದ ಲೋಕಸಭೆ ಚುನಾವಣೆ ಅಭ್ಯರ್ಥಿ ಜೈಲು ಪಾಲಾಗಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸಿದ ಮಹಿಳಾ ಭಕ್ತರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕೋಯಿಕ್ಕೋಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಬಾಬು ಅವರನ್ನು ಜೈಲಿಗೆ ಕಳುಹಿಸಲಾಗಿದೆ.
ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ರಣ್ಣಿಯ ನ್ಯಾಯಾಲಯವೊಂದು ಪ್ರಕಾಶ್ ಬಾಬು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಶಬರಿಮಲೆಯ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶಿಸಬಹುದು ಎಂದು ಸೆ. 28ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಜಾರಿಗೊಳಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಮಹಿಳೆಯರಲ್ಲಿ ಒಬ್ಬರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಪ್ರಕಾಶ್ ಬಾಬು ಅವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Kerala: BJP Kozhikode Lok Sabha candidate Prakash Babu remanded to 14 day judicial custody by Pathanamthitta Court in connection with Sabarimala case violence.
— ANI (@ANI) 28 March 2019
ಪ್ರಕಾಶ್ ಬಾಬು ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಅವರನ್ನು ಕೊತ್ತರಕ್ಕರಾ ಉಪ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಅವರು ಕೂಡಲೇ ಮೇಲಿನ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.
ಬಾಬು ಅವರು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೇರಳದಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ.












Click it and Unblock the Notifications